ಬೈಡೆನ್ -ಮೋದಿ ದ್ವಿಪಕ್ಷೀಯ ಸಭೆ

ನವದೆಹಲಿ,ಸೆ.೮:ಜಿ-೨೦ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಂದು ನವದೆಹಲಿಗೆ ಆಗಮಿಸುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ಪ್ರಧಾನಿ ನರೇಂದ್ರಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸುವರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಂದು ಸಂಜೆ ನವದೆಹಲಿಗೆ ಆಗಮಿಸಲಿದ್ದು, ರಾತ್ರಿ ಅವರೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸುವರು.ಎರಡೂ ದೇಶಗಳ ಮುಖ್ಯಸ್ಥರ ಈ ದ್ವಿಪಕ್ಷೀಯ ಸಭೆಯಲ್ಲಿ ಜಾಗತಿಕ ಸಮಸ್ಯೆಯಾದ ಹವಾಮಾನ ಬದಲಾವಣೆ, ವಿಶ್ವಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿಯಂತೆ ಅಂತಾರಾಷ್ಟ್ರೀಯ ಒಕ್ಕೂಟದಲ್ಲಿ ಆಗಬೇಕಾದ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಈ ಇಬ್ಬರು ನಾಯಕರು ಚರ್ಚೆ ನಡೆಸುವರು. ಇದರ ಜತೆಗೆ ಉಕ್ರೇನ್ ಯುದ್ಧದ ಬಗ್ಗೆಯೂ ಚರ್ಚೆಗಳಾಗಲಿದ್ದು, ಅಮೆರಿಕ-ಭಾರತ ದೇಶಗಳ ನಡುವೆ ಆಧುನಿಕ ತಂತ್ರಜ್ಞಾನ ವಿನಿಮಯ ಸೇರಿದಂತೆ ಚರ್ಚೆ ನಡೆಯಲಿದೆ.
ಇಂದು ಸಂಜೆ ಆಗಮನ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಭಾರತಕ್ಕೆ ಅಮೆರಿಕದ ಮೇರಿಲ್ಯಾಂಡ್ ವಾಯುನೆಲೆಯಿಂದ ಏರ್‌ಫೋರ್ಸ್ ೧ ವಿಮಾನದ ಮೂಲಕ ಪ್ರಯಾಣಿಸಿದ್ದು, ಸಂಜೆ ಅವರು ನವದೆಹಲಿಗೆ ಆಗಮಿಸುವರು.ಏರ್ ಫೋರ್ಸ್ ೧ ವಿಮಾನ ಇಂಧನ ತುಂಬಿಕೊಳ್ಳಲು ಮಾರ್ಗಮಧ್ಯೆ ಜರ್ಮನಿಯಲ್ಲಿ ಇಳಿಯಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಜತೆ ಅವರ ಪತ್ನಿ ಆಗಮಿಸುತ್ತಿಲ್ಲ. ಜೋ ಬೈಡೆನ್ ಅವರ ಪತ್ನಿ ಜಿಲ್ಲಿಬೈಡೆನ್ ಅವರಿಗೆ ಕಳೆದ ಸೋಮವಾರ ಕೋವಿಡ್‌ಸೋಂಕು ದೃಢಪಟ್ಟಿತ್ತು. ಹಾಗಾಗಿ ಅವರು ಭಾರತಕ್ಕೆ ಬರುತ್ತಿಲ್ಲ.
ಪತ್ನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೋ ಬೈಡೆನ್ ಅವರು ಭಾರತಕ್ಕೆ ಪ್ರಯಾಣಿಸುವ ಒಂದು ಗಂಟೆ ಮೊದಲು ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದು, ಅವರ ವರದಿ ನೆಗೆಟೀವ್ ಬಂದಿದೆ.ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್‌ಸುಲ್ಲಿವ್ಯಾನ್, ಸಿಬ್ಬಂದಿ ವಿಭಾಗದ ಉಪಮುಖ್ಯಸ್ಥೆ ಜೇನ್‌ಒಮ್ಯಾಲೆ, ಕಚೇರಿಯ ನಿರ್ವಹಣಾ ನಿರ್ದೇಶಕಿ ಅನಿಕೋಮಾಸಿನ್ ಭಾರತಕ್ಕೆ ಆಗಮಿಸುತ್ತಿದ್ದಾರೆ.