ಬೈಡೆನ್ ಮನೆಯಲ್ಲಿ ಮತ್ತಷ್ಟು ವರ್ಗೀಕೃತ ದಾಖಲೆಗಳು

ನ್ಯೂಯಾರ್ಕ್,ಜ.೨೨-ಈಗಾಗಲೇ ರಹಸ್ಯ ವರ್ಗೀಕೃತ ದಾಖಲೆಗಳು ಹಲವೆಡೆಗಳಲ್ಲಿ ಪತ್ತೆಯಾಗಿ ತೀವ್ರ ಮುಜುಗರಕ್ಕೆ ಸಿಲುಕಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಇದೀಗ ಮತ್ತಷ್ಟು ವಿವಾದಕ್ಕೆ ಸಿಲುಕಿದ್ದಾರೆ. ಇದೀಗ ಅಮೆರಿಕಾದ ನ್ಯಾಯಾಂಗ ಇಲಾಖೆಯ ತನಿಖಾಧಿಕಾರಿಗಳು (ಡಿಒಜೆ) ನಡೆಸಿದ ೧೩ ಗಂಟೆಗಳ ಶೋಧ ಕಾರ್ಯಾಚರಣೆಯಲ್ಲಿ ಬೈಡೆನ್ ಮನೆಯಿಂದ ಮತ್ತಷ್ಟು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರ ವಕೀಲರು ತಿಳಸಿದ್ದಾರೆ.
ಇನ್ನು ಸದ್ಯ ಪತ್ತೆಯಾಗಿರುವ ರಹಸ್ಯ ದಾಖಲೆಗಳು ಇತ್ತೀಚಿಗೆ ಸಂಬಂಧಿಸಿದಲ್ಲವಾಗಿದೆ. ಅಲ್ಲದೆ ಬೈಡೆನ್ ಸೆನೆಟರ್ ಆಗಿದ್ದ ಸಮಯದಲ್ಲಿ ಹಾಗೂ ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ವೇಳೆ ಬೈಡೆನ್ ಉಪಾಧ್ಯಕ್ಷರಾಗಿದ್ದ ಅವಧಿಗೆ ಸಂಬಂಧಿಸಿದ್ದಾಗಿದೆ. ಡೆಲಾವೇರ್‌ನಲ್ಲಿರುವ ವಿಲ್ಮಿಂಗ್ಟನ್‌ನ ಬೈಡೆನ್ ಅವರಿಗೆ ಸೇರಿದ ಎಸ್ಟೇಟ್‌ನಿಂದ ಇದೀಗ ಮತ್ತಷ್ಟು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ವೇಳೆ ಬೈಡೆನ್ ಹಾಗೂ ಅವರ ಪತ್ನಿ ಘಟನಾ ಸ್ಥಳದಲ್ಲಿ ಹಾಜರಿರಲಿಲ್ಲ ಎನ್ನಲಾಗಿದೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಬೈಡೆನ್ ಅವರ ವಕೀಲರಾದ ಬಾಬ್ ಬಾಯರ್, ವೈಯಕ್ತಿಕವಾಗಿ ಕೈಬರಹದ ಟಿಪ್ಪಣಿಗಳು ಮತ್ತು ಸುತ್ತಮುತ್ತಲಿನ ವಸ್ತುಗಳನ್ನು ಸಹ ತೆಗೆದುಕೊಂಡು ಹೋಗಲಾಗಿದೆ. ತಾನು ಉಪಾಧ್ಯಕ್ಷರಾಗಿದ್ದ ಅವಧಿಗೆ ಸಂಬಂಧಿಸಿದ ಎನ್ನಲಾದ ದಾಖಲೆಗಳು ಮತ್ತು ಸಂಭಾವ್ಯ ವರ್ಗೀಕೃತ ವಸ್ತುಗಳಿಗಾಗಿ ಸಂಪೂರ್ಣ ವಿಲ್ಮಿಂಗ್ಟನ್‌ನ ಆಸ್ತಿಯಲ್ಲಿ ಹುಡುಕಾಟ ನಡೆಸಲು ಅಮೆರಿಕಾದ ನ್ಯಾಯಾಂಗ ಇಲಾಖೆಯ ತನಿಖಾಧಿಕಾರಿಗಳಿಗೆ ಅಧ್ಯಕ್ಷ ಬೈಡೆನ್ ಅವರು ಪ್ರವೇಶವನ್ನು ಮುಕ್ತವಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ನವೆಂಬರ್ ೨ರಂದು ವರ್ಗೀಕೃತ ದಾಖಲೆಗಳ ಮೊದಲ ಪಟ್ಟಿ ವಾಷಿಂಗ್ಟನ್ ಡಿಸಿಯಲ್ಲಿರುವ ಪೆನ್ ಬೈಡೆನ್ ಸೆಂಟರ್‌ನಲ್ಲಿ ಪತ್ತೆಯಾಗಿದ್ದವು. ಬಳಿಕ ಎರಡನೇ ಬ್ಯಾಚ್‌ನ ದಾಖಲೆಗಳು ಡಿಸೆಂಬರ್ ೨೦ರಂದು ವಿಲ್ಮಿಂಗ್ಟನ್‌ನಲ್ಲಿನ ಅವರ ಮನೆಯ ಗ್ಯಾರೇಜ್ ಹಾಗೂ ಜನವರಿ ೧೨ರಂದು ಮನೆಯ ಸಂಗ್ರಹಣಾ ಜಾಗದಲ್ಲಿ ಕಂಡುಬಂದಿದೆ. ಇನ್ನು ಪತ್ತೆಯಾದ ದಾಖಲೆಗಳನ್ನು ತಕ್ಷಣವೇ ರಾಷ್ಟ್ರೀಯ ಆರ್ಕೈವ್ಸ್ ಮತ್ತು ನ್ಯಾಯಾಂಗ ಇಲಾಖೆಗೆ ಅಧ್ಯ್ಕ್ಷ ಬೈಡೆನ್ ಅವರ ತಂಡವು ವರ್ಗಾಯಿಸಿದೆ. ಆದರೆ ಈ ಎಲ್ಲಾ ವರ್ಗೀಕೃತ ದಾಖಲೆಗಳನ್ನು ಬೈಡೆನ್ ಅವರು ತಮ್ಮ ಬಳಿ ಇರಿಸಿಕೊಂಡಿದ್ದರು ಎಂಬುದು ಇನ್ನೂ ತಿಳಿದು ಬಂದಿಲ್ಲ.