ಬೈಡೆನ್ ದಾಖಲೆ ಜಯ

ವಾಷಿಂಗ್ಟನ್, ನ.೧೯- ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ೮ ಕೋಟಿಗೂ ಅಧಿಕ ಮತಗಳನ್ನು ಪಡೆದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಜಯಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಅಭ್ಯರ್ಥಿಯೊಬ್ಬರು ಇದುವರೆಗೂ ಅತಿ ಹೆಚ್ಚಿನ ಮತಗಳು ಪಡೆದ ಹಿರಿಮೆಗೆ ಬೈಡನ್ ಪಾತ್ರರಾಗಿದ್ದಾರೆ.
ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ೧೫ ಕೋಟಿ ೫೦ ಲಕ್ಷಕ್ಕೂ ಅಧಿಕ ಮತಗಳ ಚಲಾವಣೆಯಾಗಿದ್ದವು. ಅದರಲ್ಲಿ ಜೋ ಬೈಡನ್ ಅವರು ೮ ಕೋಟಿಗೂ ಹೆಚ್ಚು ಮತಗಳನ್ನು ಪಡೆದಿದ್ದಾರೆ.
ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸರಿಸುಮಾರು ಅಷ್ಟೇ ಮತಗಳನ್ನು ಪಡೆದು ಕೆಲವೇ ಕೆಲವು ಲಕ್ಷಗಳ ಅಂತರದಿಂದ ಸೋಲು ಕಂಡಿದ್ದಾರೆ. ೧೯೦೮ರ ಬಳಿಕ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ಪಡೆದ ಅತ್ಯಧಿಕ ಮತಗಳು ಇದಾಗಿದೆ.
ಜೋ ಬೈಡನ್ ಪಡೆದ ೮ ಕೋಟಿ ಮತಗಳ ಪೈಕಿ ಆರು ಕೋಟಿಗೂ ಹೆಚ್ಚು ಮತಗಳು ಜನಪ್ರಿಯ ಮತಗಳಿಂದಲೇ ಬಂದಿದೆ ಎನ್ನುವುದು ಹೆಗ್ಗಳಿಕೆ ವಿಷಯ.
ನವಂಬರ್ ೩ರಂದು ನಡೆದ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ ಉಪಾಧ್ಯಕ್ಷ ಜೋ ಬೈಡನ್ ಅವರು ೩೦೬ ಚುನಾಯಿತ ಪ್ರತಿನಿಧಿಗಳ ಮತ ಪಡೆಯುವ ಮೂಲಕ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೇವಲ ೨೩೨ ಚುನಾಯಿತ ಮತಗಳನ್ನು ಪಡೆದಿದ್ದಾರೆ ಈ ಮೂಲಕ ಅಮೆರಿಕವನ್ನು ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎನ್ನುವ ಅವರ ಕನಸು ಕಮರಿ ಹೋಗಿದೆ.
ಜನವರಿ ೨೦ ಅಧಿಕಾರ ಸ್ವೀಕಾರ:
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮುಂದಿನ ವರ್ಷ ಜನವರಿ ೨೦ರಂದು ಅಮೆರಿಕದ ೪೬ನೇ ಅಧ್ಯಕ್ಷರಾಗಿ ಜೋ ಬೈಡನ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡರೂ ಸೋಲನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ