ಬೈಡೆನ್-ಜಿನ್‌ಪಿಂಗ್ ನಡುವೆ ಮಾತುಕತೆಗೆ ವೇದಿಕೆ ಸಿದ್ಧ?!

ನ್ಯೂಯಾರ್ಕ್, ನ.೧೦- ಅಮೆರಿಕಾ ಹಾಗೂ ಚೀನಾ ನಡುವಿನ ಶೀತಲ ಸಮರಕ್ಕೆ ಸದ್ಯ ಕೊಂಚ ಬ್ರೇಕ್ ಬೀಳುವ ಸಾಧ್ಯತೆ ಗೋಚರಿಸಿದೆ. ಮುಂದಿನ ವಾರ ಯುಎಸ್ ಅಧ್ಯಕ್ಷ ಜೋ ಬೈಡೆನ್ ಹಾಗೂ ಚೀನಾದ ಕ್ಷೀ ಜಿನ್‌ಪಿಂಗ್ ನಡುವೆ ವರ್ಚುವಲ್ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ.
ಸಭೆ ನಡೆಯಲಿರುವ ಬಗ್ಗೆ ಅಮೆರಿಕಾದ ಶ್ವೇತಭವನದ ವಕ್ತಾರ ಅಥವಾ ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಬಾರಿ ಕಚೇರಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ವಿಶ್ವದ ಎರಡು ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಅಮೆರಿಕಾ ಹಾಗೂ ಚೀನಾ ನಡುವೆ ಮಾತುಕತೆ ನಡೆಯಬೇಕು. ಈ ಮೂಲಕ ಸಂಬಂಧ ಹದಗೆಡುವುದನ್ನು ತಪ್ಪಿಸಬಹುದು ಎಂದು ಅಮೆರಿಕಾದ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕಳೆದ ತಿಂಗಳು ಸ್ವಿಟ್ಝರ್‌ಲ್ಯಾಂಡ್‌ನ ಜ್ಯೂರಿಚ್ ನಗರದಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜ್ಯಾಕ್ ಸುಲ್ಲಿವಾನ್ ಹಾಗೂ ಚೀನಾದ ಯಾಂಗ್ ಜೀಚಿ ನಡುವೆ ಮಾತುಕತೆ ನಡೆದಿತ್ತು. ಈ ವೇಳೆ ಪ್ರಸಕ್ತ ವರ್ಷಾಂತ್ಯದ ವೇಳೆ ಬೈಡೆನ್ ಹಾಗೂ ಕ್ಷೀ ನಡುವೆ ವರ್ಚುವಲ್ ಮಾತುಕತೆ ನಡೆಯಲಿದೆ ಎಂದು ಹೇಳಲಾಗಿತ್ತು. ಚೀನಾದಲ್ಲಿ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ವರ್ಚುವಲ್ ಮೂಲಕವೇ ಮಾತುಕತೆ ನಡೆಯಲಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಕೂಡ ಮಾಡಿತ್ತು. ಆದರೆ ಮೂಲಗಳ ಪ್ರಕಾರ ಅಮೆರಿಕಾ ಸಭೆಯ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಆದರೆ ಅಧಿಕೃತ ಹೇಳಿಕೆ ಇನ್ನೂ ಎರಡೂ ಕಡೆಗಳಿಂದ ಹೊರಬಂದಿಲ್ಲ.