ಬೈಕ್ ವ್ಹೀಲಿಂಗ್: ನಾಲ್ವರ ಬಂಧನ

ತುಮಕೂರು, ಆ. ೭- ನಗರದ ಹೊರವಲಯದ ರಿಂಗ್ ರಸ್ತೆ ಹಾಗೂ ಟ್ರಕ್ ಟರ್ಮಿನಲ್ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಇಲ್ಲಿನ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಇಸ್ಮಾಯಿಲ್ ನಗರದ ಶೋಯಬ್ ಅಹಮದ್ (೨೦), ಮರಳೂರು ದಿಣ್ಣೆಯ ಶೋಯಬ್ (೨೧), ಮರಳೂರು ಜನತಾ ಕಾಲೋನಿಯ ಅರ್ಫಾಜ್ ಶರೀಫ್ (೧೮) ಹಾಗೂ ದಸ್ತಗೀರ್ ಪಾಷ (೧೯) ಎಂಬುವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ನಾಲ್ವರು ಯುವಕರು ನಗರದ ಹೊರವಲಯದ ರಿಂಗ್ ರಸ್ತೆ, ಟ್ರಕ್ ಟರ್ಮಿನಲ್ ರಸ್ತೆ ಹಾಗೂ ಬಟವಾಡಿಯ ೮೦ ಅಡಿ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಸಂಚಾರಿ ಠಾಣೆಯ ಪೊಲೀಸರು ಸದರಿ ಯುವಕರನ್ನು ಬಂಧಿಸಿ, ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರ ಹಾಗೂ ಜಿಲ್ಲೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಹುಚ್ಚು ಸಾಹಸವನ್ನು ಮರೆದು ತನ್ನ ವಿಕೃತ ಮನಸ್ಸಿನಿಂದ ಜೀವವನ್ನು ಪಣಕಿಟ್ಟು ಎಷ್ಟೋ ಯುವಕರು ಜೀವ ಕಳೆದುಕೊಂಡಿದ್ದಾರೆ. ಇಂತಹ ಹುಚ್ಚು ಪ್ರವೃತ್ತಿಯಿಂದ ಇತರೆ ಅಮಾಯಕ ವಾಹನ ಚಾಲಕರುಗಳಿಗೆ ಮತ್ತು ಸಾರ್ವಜನಿಕರಿಗೆ ಅಪಘಾತಗಳು ಉಂಟಾಗಿರುವುದು ಕಂಡು ಬರುತ್ತಿದೆ. ಆದ್ದರಿಂದ ಇಂತಹ ಘಟನೆಗಳಲ್ಲಿ ಭಾಗಿಯಾಗುವ ವಾಹನ ಚಾಲಕರು ಮತ್ತು ವಾಹನಗಳ ಮಾಲೀಕರುಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇಂತಹ ಬೈಕ್ ವ್ಹೀಲಿಂಗ್ ಮಾಡುವ ಹುಚ್ಚು ಸಾಹಸವನ್ನು ಪ್ರದರ್ಶಿಸುವವರು ಕಂಡು ಬಂದಲ್ಲಿ ಕೂಡಲೇ ಸಾರ್ವಜನಿಕರು ೧೧೨ ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.