ಬೈಕ್ ಲಾರಿ ನಡುವೆ ಭೀಕರ ಅಪಘಾತ: ಐವರ ದುರ್ಮರಣ

ಅಫಜಲಪುರ: ವೇಗವಾಗಿ ಬರುತ್ತಿದ್ದ ಲಾರಿ ಮತ್ತು ಬೈಕಿನ ನಡುವೆ ಮುಖಾ ಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ
ಸಾವನ್ನಪ್ಪಿದ ಘಟನೆ ಗುರುವಾರ ಸಾಯಂಕಾಲ 4.30 ರ ಸುಮಾರಿಗೆ ಜರುಗಿದೆ.

ಮಹಾರಾಷ್ಟ್ರದ ದುಧನಿಗೆ ಸಹೋದರನ ಆರೋಗ್ಯ ವಿಚಾರಿಸಿ ಹಿಂದಿರುಗಿ ಬರುವಾಗ ಹಳ್ಯಾಳ ಕ್ರಾಸ್ ಹತ್ತಿರ ಹೆದ್ದಾರಿ ಮಧ್ಯದಲ್ಲಿ ಬೈಕು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 2 ಮಕ್ಕಳು ಸೇರಿದಂತೆ ಒಟ್ಟು 5 ಜನ ದುರ್ಮರಣಕ್ಕೀಡಾಗಿದ್ದಾರೆ.

ಮೃತರೆಲ್ಲರೂ ನೇಪಾಳ ಮೂಲದ ಸುರಖೇತ್ ಜಿಲ್ಲೆಯವರು ಎಂದು ತಿಳಿದು ಬಂದಿದ್ದು ಕಳೆದ ಎರಡು ವರ್ಷಗಳಿಂದ ಅಫಜಲಪುರ ಪಟ್ಟಣದಲ್ಲಿ ಚೈನೀಸ್ (ಫಾಸ್ಟ್ ಫುಡ್) ಸೆಂಟರ್ ನಡೆಸುತ್ತಿದ್ದರು.

ಮೃತರನ್ನು ರೋಷನ್ ನೇವಾರ್(28), ಅಸ್ಮಿತಾ ಗಂ. ರೋಶನ್ (23), ಸ್ವಸ್ತಿಕಾ ಗಂ. ಕೃಷ್ಣ(20), ಮಿಲನ (5), ಲಖನ್ (2) ಎಂದು ಗುರುತಿಸಲಾಗಿದ್ದು ಮೃತರ ಶವಗಳನ್ನು ಮರಣೋತ್ತರ‌ ಪರೀಕ್ಷೆಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಪಘಾತ ಸಂಭವಿಸಿದ ಬಳಿಕ ಆಂಧ್ರ ಮೂಲದ ಲಾರಿ ಚಾಲಕ ಪರಾರಿಯಾಗಿದ್ದಾನೆ.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪಿಎಸ್ಐ ಮಡಿವಾಳಪ್ಪ ಬಾಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.