ಬೈಕ್ – ಲಾರಿ ಡಿಕ್ಕಿ : ಬೆಂಕಿ ಹೊತ್ತಿಉರಿದು ಬೈಕ್ ಸವಾರ ಸಾವು

ಬೆಂಗಳೂರು,ಸೆ.೧೬-ಏಕಮುಖ ಸಂಚಾರದ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ, ವಿರುದ್ಧ ದಿಕ್ಕಿನಲ್ಲಿ ಬೈಕ್‌ನಲ್ಲಿ ಬಂದ ಫಾರ್ಮಸಿಸ್ಟ್ ವಿದ್ಯಾರ್ಥಿಯೊಬ್ಬ ಲಾರಿ ಡಿಕ್ಕಿ ಹೊಡೆದು ಎರಡು ವಾಹನಗಳು ಸುಟ್ಟು ಸಂಭವಿಸಿದ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ದಾರುಣ ಘಟನೆ ಇಂದು ನಸುಕಿನಲ್ಲಿ ಸದಾಶಿವನಗರದ ಶೆಲ್ ಪೆಟ್ರೊಲ್ ಬಂಕ್ ಬಳಿ ಸಂಭವಿಸಿದೆ.
ತ್ರಿಪುರ ಮೂಲದ ಕನಕನಗರದ ಡಿ ಫಾರ್ಮ ವಿದ್ಯಾರ್ಥಿ ಸುಮನ್ ಬಾನಿಕ್ (೨೨) ಮೃತಪಟ್ಟವರು.ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಲಾರಿ ಹಾಗೂ ಬೈಕ್ ನಡುವಿನ ಅಪಘಾತ ದೃಶ್ಯವನ್ನು ನೋಡಿದವರ ಎದೆ ಝಲ್ ಎನ್ನುವಂತಿದೆ.ಸುಮಾರು ೩೦೦ ಮೀಟರ್ ದೂರಕ್ಕೆ ಬೈಕ್ ಅನ್ನು ಲಾರಿ ಎಳೆದುಕೊಂಡು ಹೋಗಿದೆ. ಬೈಕ್ ಲಾರಿಗೆ ಸಿಲುಕಿಕೊಂಡಾಗ ಸ್ಪಾರ್ಕ್ ಆಗಿ ಲಾರಿಗೂ ಬೆಂಕಿ ಹತ್ತಿಕೊಂಡಿದೆ.
ಬಳ್ಳಾರಿ ರಸ್ತೆ ಶೆಲ್ ಪೆಟ್ರೋಲ್ ಬಂಕ್ ಬಳಿ ಹೆಬ್ಬಾಳ ಕಡೆಯಿಂದ ಮೇಕ್ರಿ ವೃತ್ತದ ಕಡೆ ಹೋಗುವ ಎಕಮುಖ ಸಂಚಾರ ರಸ್ತೆಯಲ್ಲಿ ಹೆಬ್ಬಾಳ ಕಡೆಯಿಂದ ಮೇಕ್ರಿ ವೃತ್ತದ ಕಡೆಯಿಂದ ಮೇಕ್ರಿ ಕಡೆಗೆ ಹೊಗುತ್ತಿದ್ದ ಲಾರಿಯು ಶೆಲ್ ಪೆಟ್ರೋಲ್ ಬಂಕ್ ನಿಂದ ಸಂಜಯನಗರ ಕಡೆ ಯು ತಿರುವು ಹೆಬ್ಬಾಳದ ಕಡೆಗೆ ಎಕಮುಖ ಸಂಚಾರದ ವಿರುದ್ಧ ದಿಕ್ಕಿನಲ್ಲಿ ತೆಗೆದುಕೊಳ್ಳುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ
ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿದ್ದು,ಅಪಘಾತದ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸದಾಶಿವನಗರ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಸುಟ್ಟು ಹೋದ ವಾಹನಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.