ಅಫಜಲಪುರ:ಎ.4: ಮುಂಬರುವ ಮೇ. 10 ರ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ವಯೋಮಿತಿ ಆಧಾರದ ಅನ್ವಯ ಮತದಾನದ ಗುರುತಿನ ಚೀಟಿ ಪಡೆದ ಎಲ್ಲ ಅರ್ಹ ಮತದಾರರು ತಪ್ಪದೇ ಮತದಾನ ಮಾಡುವಂತೆ ತಾಲೂಕಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಫಿ ತಿಳಿಸಿದರು.
ಪಟ್ಟಣದ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಕುರಿತು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡ ಬೈಕ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ದಿ. 10 ಕೊನೆಯ ದಿನವಾಗಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಶ್ರೇಷ್ಠ ದಾನವಾದ ಮತದಾನವು ಪ್ರಜಾಪ್ರಭುತ್ವದ ಹಬ್ಬ ಎಂದು ಭಾವಿಸಿ ಮತದಾನದಲ್ಲಿ ಭಾಗವಹಿಸಬೇಕು. ಶೇ. 90 ರಿಂದ 100 ರ ವರೆಗೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದ ಅವರು ಈಗಾಗಲೇ ತಾಲೂಕು ಕೇಂದ್ರದ ಎಲ್ಲ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮತದಾನದ ಜಾಗೃತಿ ಕುರಿತು ಅಭಿಯಾನ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಅಭಿಯಾನದಲ್ಲಿ ತಾಲೂಕಾ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.