ತುಮಕೂರು, ಸೆ. ೨೩- ತಾಲ್ಲೂಕಿನ ನಾಮದ ಚಿಲುಮೆಯ ಬಳಿ ಎರಡು ಬೈಕ್‌ಗಳ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ತಿಮ್ಮನಾಯಕನಹಳ್ಳಿ ಗ್ರಾಮದ ರಾಮಯ್ಯ (೪೫) ಹಾಗೂ ರಾಜಣ್ಣ (೩೨) ಎಂಬುವರೇ ಗಾಯಗೊಂಡಿರುವ ಸವಾರರು. ಇವರುಗಳು ತುಮಕೂರಿಗೆ ಗಾರೆ ಕೆಲಸಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಬುಡ ಸಮೇತ ಮರ ಉರುಳಿ ಬಿದ್ದಿದೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮರ ರಸ್ತೆಗೆ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಾಮದ ಚಿಲುಮೆಯ ರಸ್ತೆಯಲ್ಲಿ ತೆರಳುತ್ತಿದ್ದ ವಾಹನಗಳು ಗಂಟೆಗಟ್ಟಲೆ ನಿಂತಲ್ಲಿಯೇ ನಿಂತಿದ್ದವು. ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಮರ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ. ರಸ್ತೆ ಬದಿ ಇರುವ, ಬೀಳುವ ಸ್ಥಿತಿಯಲ್ಲಿ ಇರುವ ಮರಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ರಸ್ತೆಗೆ ಉರುಳಿದ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದರು. ಆಗಲೂ ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಾರೆ ಎಂದು ಕಿಡಿಕಾರಿದ್ದಾರೆ.