ಬೈಕ್ ಡಿಕ್ಕಿ ಹಿರಿಯ ವಕೀಲ ಸಾವು

ಬೆಂಗಳೂರು,ಫೆ.೨೭-ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ನಡೆದುಕೊಂಡು ಹೋಗುತಿದ್ದ ಶಿವಮೊಗ್ಗ ಮೂಲದ ಹಿರಿಯ ವಕೀಲರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಿನ್ನೆ ರಾತ್ರಿ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿ ನಡೆದಿದೆ.
ಹಿರಿಯ ವಕೀಲ ಕೆ.ಟಿ.ಡಾಕಪ್ಪ ಮೃತಪಟ್ಟವರು,ರಾತ್ರಿ ೯ರ ವೇಳೆ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿ ಕೆ.ಟಿ.ಡಾಕಪ್ಪ ಕಾರು ನಿಲ್ಲಿಸಿ ಡಿವಿಜೆ ರಸ್ತೆಯ ಕಚೇರಿಗೆ ಹೋಗಿ ಕೆಲಸ ಮುಗಿಸಿ ಬಳಿಕ ಮನೆಗೆ ಹೋಗಲು ವಾಪಸ್ ಕಾರು ಬಳಿ ನಡೆದುಕೊಂಡು ಬರುವಾಗ ಅಪಘಾತ ಸಂಭವಿಸಿದೆ.
ಕೆಟಿಎಂ ಬೈಕ್?ನಲ್ಲಿ ಅತೀ ವೇಗವಾಗಿ ಬಂದ ಅದಿತ್ಯಾ (೨೧) ಯುವಕ ನಡೆದುಕೊಂಡು ಹೋಗುತ್ತಿದ್ದ ವಕೀಲ ಡಾಕಪ್ಪ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಡಾಕಪ್ಪ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ಡಾಕಪ್ಪ ಅವರನ್ನು ಸ್ಥಳೀಯರು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಡಾಕಪ್ಪ ನಿಧನರಾಗಿದ್ದಾರೆ.
ಹೈ ಕೋರ್ಟ್ ಹಾಗೂ ಇತರ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿದ್ದ ಡಾಕಪ್ಪ ಶಿವಮೊಗ್ಗ ಮೂಲದ ತೀರ್ಥಹಳ್ಳಿಯ ಕೌರಿ ಮೂಲದವರು. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿದ್ದರು.
ವಕೀಲ ಡಾಕಪ್ಪರಿಗೆ ಗುದ್ದಿದ ಬಳಿಕ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಆದಿತ್ಯಾನಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಸವನಗುಡಿ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.