ಬೈಕ್, ಟ್ಯಾಕ್ಸಿ ಸೇವೆ ಪುನಾರಂಭಕ್ಕೆ ಉಬರ್ ನಿರ್ಧಾರ

ಬೆಂಗಳೂರು, ಜು.೨೬- ಉಬರ್ ಸಂಸ್ಥೆಯೂ ಇದೀಗ ಬೈಕ್-ಟ್ಯಾಕ್ಸಿ ಸೇವೆಯನ್ನು ಮರು ಪ್ರಾರಂಭಿಸಲು ಮುಂದಾಗಿದ್ದು, ಇದರಿಂದ ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಬರೆ ಬೀಳಲಿದೆ.
ಆಪ್ ಆಧಾರಿತ ಅಗ್ರಿಗೇಟರ್ ಉಬರ್ ನಗರದಲ್ಲಿ ತನ್ನ ಬೈಕ್-ಟ್ಯಾಕ್ಸಿ ಸೇವೆಗಳನ್ನು (ಉಬರ್ ಮೋಟೋ) ಮರುಪ್ರಾರಂಭಿಸಿದೆ. ಇದು ಪ್ರಯಾಣಿಕರ ಆರ್ಥಿಕ ಹೊರೆ ತಗ್ಗಿಸಿದರೂ, ಆಟೋರಿಕ್ಷಾ ಚಾಲಕರು ಈ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ.
ಈ ಹಿಂದೆ ರಾಪೀಡೋ ೨೦೧೬ ರಿಂದ ನಗರದಲ್ಲಿ ಎಲೆಕ್ಟ್ರಿಕ್ ಅಲ್ಲದ ಬೈಕ್-ಟ್ಯಾಕ್ಸಿಗಳನ್ನು ನಿರ್ವಹಿಸುತ್ತಿದೆ.ಇದೀಗ ಉಬರ್ ಸೇವೆಗೆ ಮುಂದಾಗಿದೆ.ಇದಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಚಾಲಕರು,
ಸಾರಿಗೆ ಇಲಾಖೆಯು ಅನುಮತಿಯಿಲ್ಲದೆ ಚಾಲನೆಯಲ್ಲಿರುವ ಇದನ್ನು ಬಂದ್ ಮಾಡುವಂತೆ ಆಗ್ರಹಿಸಿದರು.
ಆಟೋರಿಕ್ಷಾಗಳು ಸರ್ಕಾರದ ನಿಗದಿತ ದರದಲ್ಲಿ ಓಡಿಸಲು ನಿರಾಕರಿಸಿದಾಗ, ಕ್ಯಾಬ್ ಗಳು ದುಬಾರಿ ಮತ್ತು ವಿಶ್ವಾಸಾರ್ಹವಾಗಿರುತ್ತವೆ. ಬೈಕ್ ಟ್ಯಾಕ್ಸಿಗಳು ನಗರಕ್ಕೆ ಹೆಚ್ಚು ಸೂಕ್ತವಾಗಿದೆ. ಈ ಟ್ರಾಫಿಕ್‌ನಲ್ಲಿ ಇದು ಅಗ್ಗವಾಗಿದೆ ಮತ್ತು ವೇಗವಾಗಿದೆ ಎಂದು ಜೆಪಿ ನಗರದ ನಿವಾಸಿ ರಮೇಶ್ ಕುಮಾರ್ ಹೇಳಿದರು.
ಮತ್ತೊಂದೆಡೆ, ಆಟೊರಿಕ್ಷಾ ಚಾಲಕರು ವೈಟ್ ಬೋರ್ಡ್ ದ್ವಿಚಕ್ರ ವಾಹನಗಳನ್ನು ಬೈಕ್-ಟ್ಯಾಕ್ಸಿಗಳಾಗಿ ಓಡಿಸಲು ಅನುಮತಿಸುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಇನ್ನೂ, ಇತ್ತೀಚೆಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಶನ್, ಅಕ್ರಮ ಬೈಕ್-ಟ್ಯಾಕ್ಸಿ ಮತ್ತು ಕೋವಿಡ್ -೧೯ ನಿಂದಾಗಿ ಆಟೋ ಚಾಲಕರ ಆದಾಯ ಕಡಿಮೆಯಾಗಿದೆ. ಹಳದಿ ಬೋರ್ಡ್ ವಾಹನಗಳಿಂದಾಗಿ ನಾವು ಹೆಚ್ಚಿನ ವಿಮಾ ಪ್ರೀಮಿಯಂ, ಎಂವಿ ತೆರಿಗೆಗಳನ್ನು ಪಾವತಿಸುತ್ತಿದ್ದೇವೆ ಎಂದರು.