ಬೈಕ್ ಗೆ ಲಾರಿ ಡಿಕ್ಕಿ – ಬಾಲಕಿ ಸಾವು, ತಂದೆ ಮಗನಿಗೆ ಗಾಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ ಮೇ 30 :- ಬೈಕೊಂದು ಟೆಂಪ್ರವೇರಿ ಯು ಟರ್ನ್ ಮಾಡುವಾಗ  ಹೊಸಪೇಟೆ ಕಡೆಗೆ ಹೊರಟಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಬಾಲಕಿಯೋರ್ವಳು ಸ್ಥಳದಲ್ಲೇ ಮೃತಪಟ್ಟಿದ್ದು 3ವರ್ಷದ ಮಗು ಹಾಗೂ ಆತನ ತಂದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಿಗ್ಗೆ 10-45ಗಂಟೆ ಸುಮಾರಿಗೆ ಎಂ ಬಿ ಅಯ್ಯನಹಳ್ಳಿ ಗ್ರಾಮದ ವೈಭವ ಡಾಬಾದ ಹತ್ತಿರದ ಹೈವೇ 50ರ ರಸ್ತೆಯಲ್ಲಿ ಜರುಗಿದೆ.
ಚಿಕ್ಕಜೋಗಿಹಳ್ಳಿ ಸಮೀಪದ ಸಿದ್ದಾಪುರ ಗ್ರಾಮದ ಬಸಮ್ಮ (13) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿ ಬಾಲಕಿಯಾಗಿದ್ದು ಬೈಕ್ ಸವಾರ ಮಹೇಶ (32)ಹಾಗೂ ಈತನ ಮಗ ಲಕ್ಷ್ಮಣ (3) ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಹೇಳಬಹುದಾಗಿದೆ.
ಇವರುಗಳು ಎಂ ಬಿ ಅಯ್ಯನಹಳ್ಳಿ ಗ್ರಾಮದ ವೈಭವ ಡಾಬಾ ಹತ್ತಿರದ ಟೆಂಪ್ರವೇರಿ ಯು ಟರ್ನ್ ನಿಂದ ಹೊಸಪೇಟೆ ಕಡೆ ರಸ್ತೆಕಡೆಗೆ ಬೈಕನ್ನು ತಿರುಗಿಸುವಾಗ ಚಿತ್ರದುರ್ಗ ಕಡೆಯಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಲಾರಿ ಚಾಲಕ ವೇಗವಾಗಿ ಬಂದು ಬೈಕ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ತಕ್ಷಣ ಕೆಳಗೆ ಬಿದ್ದ ಬಸಮ್ಮಳಿಗೆ ತಲೆ ಹಾಗೂ ಇತರೆಡೆ ರಕ್ತಸ್ರಾವಾದ ತೀವ್ರಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಹೇಶನಿಗೆ ಕೈ ಕಾಲುಗಳಿಗೆ ಪೆಟ್ಟಾಗಿದೆ ಹಾಗೂ ಮೂರು  ವರ್ಷದ ಮಗು ಲಕ್ಷ್ಮಣ ಗೆ ಮುಖಕ್ಕೆ ತೆರೆಚಿದ ಗಾಯವಾಗಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಲಾರಿ ಚಾಲಕ ಲಾರಿಯನ್ನು ಅಲ್ಲಿಯೇ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ತಿಳಿದಿದೆ.
ಮಾನವೀಯತೆ ಮೆರೆದ ಹೆದ್ದಾರಿ ಸಹಾಯಕರು : ಇಂದು ಬೆಳಿಗ್ಗೆ ಅಪಘಾತವಾಗುತ್ತಿದ್ದಂತೆ ತಕ್ಷಣ ಅಂಬ್ಯುಲೆನ್ಸ್, ಪೊಲೀಸ್ ಸಿಬ್ಬಂದಿ ಹಾಗೂ ಹೆದ್ದಾರಿ ಟೋಲ್ ಅವರಿಗೆ ವಾಟ್ಸಾಪ್ ಗ್ರೂಪ್ ಮೂಲಕ  ಗಮನಕ್ಕೆ ತಂದು ಇಬ್ಬರ ಪ್ರಾಣ ಉಳಿಸಿದ್ದು ಜನತೆ ಈ ಹೆದ್ದಾರಿ ಸಹಾಯಕರ ಗ್ರೂಪ್ ಗೆ ಅಭಿನಂದನೆ ಸಲ್ಲಿಸಿದ್ದಾರೆ .
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ ಹೊಸಹಳ್ಳಿ ಪಿಎಸ್ಐ ಗಳಾದ ಎರಿಯಪ್ಪ ಅಂಗಡಿ ಹಾಗೂ ನಾಗರತ್ನಮ್ಮ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಟೋಲ್ ಅಂಬ್ಯುಲೆನ್ಸ್ ನಲ್ಲಿ ಕಳುಹಿಸಿದ್ದಾರೆ ಹಾಗೂ ಟೆಂಪ್ರವೇರಿ ಯು ಟರ್ನ್ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಪಿಎಸ್ಐ ಎರಿಯಪ್ಪ ತಿಳಿಸಿದ್ದಾರೆ.