ಬೈಕ್ ಕಳ್ಳರ ಬಂಧನ: 1.63 ಲಕ್ಷ ಮೌಲ್ಯದ ವಿವಿಧ ಸಾಮಾಗ್ರಿ ವಶ

ಮರಿಯಮ್ಮನಹಳ್ಳಿ, ಜೂ.06: ಪಟ್ಟಣದ ಪೊಲೀಸರು ಶನಿವಾರ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ, ಅವರಿಂದ ತಾಡಪಾಲು, ಬ್ಯಾಟರಿ ಸೇರಿದಂತೆ ಅಂದಾಜು ರೂ.1.63 ಲಕ್ಷ ಮೌಲ್ಯದ ವಿವಿಧ ಸಾಮಾಗ್ರಿಗಳನ್ನು ವಶಪಡೆಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮರಿಯಮ್ಮನಹಳ್ಳಿ ತಾಂಡಾದ ಪ್ರಕಾಶ್ ನಾಯ್ಕ ಮತ್ತು ಚಂದ್ರಾನಾಯ್ಕ ಎನ್ನಲಾಗಿದ್ದು, ಶನಿವಾರ ಬೆಳಿಗ್ಗೆ ಬೈಕ್ ಕಳ್ಳತನ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ಇಬ್ಬರನ್ನು ಬಂಧಿಸಿ ವಿಚಾರಿಸಿದಾಗ ವಿವಿಧೆಡೆ ಕಳ್ಳತನ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಬಂಧಿತರಿಂದ ಮೂರು ಬೈಕ್‍ಗಳು, ಟೈಲ್ಸ್ ಕಟ್ಟಿಂಗ್ ಮಿಷನ್ ಹಾಗೂ ಕೇಬಲ್, 45 ಕಬ್ಬಿಣದ ಗ್ಯಾಸ್ ಪೈಪುಗಳು, ಲಾರಿಗೆ ಬಳಸುವ ಐದು ತಾಡುಪಾಲುಗಳು, ಎರಡು ಬ್ಯಾಟರಿಗಳು ಹಾಗೂ ಒಂದು ಇನ್ವರ್ಟರ್ ಹಾಗೂ ಟ್ಯೂಬಲರ್ ಬ್ಯಾಟರಿಯನ್ನು ವಶಪಡೆಸಿಕೊಂಡಿದ್ದಾರೆ.
ಮರಿಯಮ್ಮನಹಳ್ಳಿ ಪಟ್ಟಣದ ಪಿಎಸ್‍ಐ ಹನುಮಂತಪ್ಪ ತಳವಾರ್, ಅಪರಾಧ ವಿಭಾಗದ ಪಿಎಸ್‍ಐ ಬಿ.ಮೀನಾಕ್ಷಿ, ಪ್ರೊಬೆಷನರಿ ಪಿಎಸ್‍ಐ ನಾರಾಯಣ, ಎಎಸ್‍ಐಗಳಾದ ನಿರಂಜನ ಗೌಡ, ಮುರಾರಿ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.