ಬೈಕ್ ಕಳ್ಳತನ ಆರೋಪಿಯ ಬಂಧನ: 10 ಲಕ್ಷ ರೂ. ಮೌಲ್ಯದ 22 ಬೈಕ್‌ಗಳ ವಶ

ಮಂಡ್ಯ: ಜಿಲ್ಲೆಯ ನಾಗಮಂಗಲ ಗ್ರಾಮಾಂತರ ಪೋಲಿಸ್ ಠಾಣೆ ಪೋಲಿಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 22 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ವಿವರ: ಏ.5 ರಂದು ತಾಲೂಕಿನ ಪಿ.ಮಲ್ಲೇನಹಳ್ಳಿ ಗ್ರಾಮದ ಮರೀಗೌಡ ಎಂಬುವವರು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ಬೋಗಾದಿ ಸಂತೆೆಯಲ್ಲಿ ನಿಲ್ಲಿಸಿದ್ದ ತನ್ನ ಬೈಕ್‌ನ್ನು ಮಾ.23 ರಂದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಸಿ.ಈ.ತಿಮ್ಮಯ್ಯ ರವರ ಮಾರ್ಗದರ್ಶನದಲ್ಲಿ, ನಾಗಮಂಗಲ ಡಿಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್, ನಾಗಮಂಗಲ ವೃತ್ತದ ಸಿ.ಪಿ.ಐ ನಿರಂಜನ್ ಕೆ.ಎಸ್ ರವರ ನೇತೃತ್ವದಲ್ಲಿ ನಾಗಮಂಗಲ ಗ್ರಾಮಾಂತರ ಠಾಣಾ ಪಿ.ಎಸ್.ಐ ರವಿಕುಮಾರ್, ಎ.ಎಸ್.ಐ ರವರುಗಳಾದ ಟಿ.ಲಿಂಗರಾಜು, ಸಿಬ್ಬಂದಿಯವರಾದ ನಟೇಶ ಬಾಬು, ಸಿದ್ದಪ್ಪ, ಸಂದೀಪ, ಶಶಿಕುಮಾರ್, ಪ್ರಸಾದ್, ನಾಯಕ್, ಚೇತನ್, ಮುಂತಾದ ಅಧಿಕಾರಿ ಸಿಬ್ಬಂದಿಯವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.
ಈ ಪತ್ತೆ ತಂಡವು ನಾಗಮಂಗಲ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ನಾಗಮಂಗಲ ಗ್ರಾಮಾಂತರ (02), ಬೆಳ್ಳೂರು (2), ಬಿಂಡಿಗನವಿಲೆ (1), ಕಿಕ್ಕೇರಿ (02) ಬೆಂಗಳೂರು ಕಾಮಾಕ್ಷಿ ಪಾಳ್ಯ (04) ಬೆಂಗಳೂರು ರಾಜಗೋಪಾಲನಗರ (01) ಬೆಂಗಳೂರು ಬ್ಯಾಡರಹಳ್ಳಿ (01) ಪೀಣ್ಯ ಪೊಲೀಸ್ ಠಾಣೆಗಳ (01) ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿರುತ್ತದೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.