ಬೈಕ್ ಕದ್ದು ವ್ಹೀಲಿಂಗ್ ಮಾಡಿ ಮಾರಾಟ ಇಬ್ಬರು ಸೆರೆ

ಬೆಂಗಳೂರು,ಜ.೧೫-ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ವ್ಹೀಲಿಂಗ್ ಮಾಡಿದ ಬಳಿಕ ಮಾರಾಟ ಮಾಡುತ್ತಿದ್ದ ಕಿಲಾಡಿ ಜೋಡಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ಸೈಯದ್ ಇಮ್ರಾನ್ (೨೭) ಮತ್ತು ಸೈಯದ್ ಅಜಂ(೩೩) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ೮ ಲಕ್ಷ ರೂ ಮೌಲ್ಯದ ೧೦ ವಿವಿಧ ಕಂಪನಿಯ ಬೈಕ್‌ಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ವೈಯಾಲಿ ಕಾವಲ್, ಚಾಮರಾಜಪೇಟೆ, ಅಶೋಕನಗರ, ವಿವೇಕನಗರ, ಹಲಸೂರು, ಕಮರ್ಷಿಯಲ್ ಸ್ಟ್ರೀಟ್, ಹುಳಿಮಾವು ಠಾಣೆಯಲ್ಲಿ ದಾಖಲಾಗಿದ್ದ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ವ್ಹೀಲಿಂಗ್ ಮಾಡಿ ಪೆಟ್ರೋಲ್ ಖಾಲಿ ಆಗುತ್ತಿದ್ದಂತೆ ನಿರ್ದಿಷ್ಟ ಸ್ಥಳವೊಂದರಲ್ಲಿ ವಾಹನ ನಿಲ್ಲಿಸುತ್ತಿದ್ದರು. ಬಳಿಕ ದಾಖಲೆಗಳನ್ನು ನಂತರ ಕೊಡುವುದಾಗಿ ಅತಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.