ಬೈಕ್ ಅಪಘಾತ: ವಿದ್ಯಾರ್ಥಿ ಮೃತ್ಯು

ತಡರಾತ್ರಿ ನಡೆದ ಘಟನೆ: ಮತ್ತೋರ್ವ ಗಂಭೀರ
ಪುತ್ತೂರು, ಮಾ.೨೨- ಸವಣೂರು ಪುತ್ತೂರು ರಸ್ತೆಯ ಮಾಂತೂರು ಎಂಬಲ್ಲಿ ಬೈಕ್ ಅಪಘಾತಗೊಂಡು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ಆದಿತ್ಯವಾರ ತಡ ರಾತ್ರಿ ನಡೆದಿದೆ. ಬೈಕ್‌ನಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾರೆ.
ಮೃತಪಟ್ಟ ವಿದ್ಯಾರ್ಥಿಯನ್ನು ಮಡಿಕೇರಿ ಸೋಮವಾರ ಪೇಟೆ ನಿವಾಸಿ ಬೋಜಪ್ಪ, ಉಮಾವತಿ ದಂಪತಿ ಪುತ್ರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿರುವ ಚೇತನ್ ಎಂದು ಗುರುತಿಸಲಾಗಿದೆ. ಮೃತನ ಸ್ನೇಹಿತ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಚೇತನ್ ಅವರು ಪುತ್ತೂರು ಪಿ.ಜಿಯಲ್ಲಿದ್ದು ಮಾ.೨೧ ರಂದು ಮಾಣಿ ಸಾದಿಕುಕ್ಕು ಜಾತ್ರೆಗೆ ಸ್ನೇಹಿತ ಸುದೀಪ್ ಅವರ ಜೊತೆ ಹೋಗಿದ್ದವರು. ಬಳಿಕ ರಾತ್ರಿ ಸ್ನೇಹಿತ ಸುದೀಪ್ ಅವರ ಬೆಳ್ಳಾರೆ ಮನೆಗೆ ಹೋಗುತ್ತಿದ್ದ ವೇಳೆ ಮಾಂತುರು ಸಮೀಪ ಬೈಕ್ ಅಪಘಾತಗೊಂಡಿದ್ದು ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಈ ನಡುವೇ ಚೇತನ್ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡ ಸುದೀಪ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.