ಬೈಕ್‌ಗೆ ಲಾರಿ ಡಿಕ್ಕಿ: ದಂಪತಿ ಮೃತ್ಯು

ತೊಕ್ಕೊಟ್ಟು, ಅ.೨೮- ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ನವ ದಂಪತಿ ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ.


ಬಜಾಲ್ ನಿವಾಸಿ ರಯಾನ್ ಫೆರ್ನಾಂಡಿಸ್ (30) ಮತ್ತು ಪ್ರಿಯಾ ಫೆರ್ನಾಂಡಿಸ್ (32) ಘಟನೆಯಲ್ಲಿ ಮೃತಪಟ್ಟ ದಂಪತಿ. ಕಂಕನಾಡಿ ಫಾದರ್ ಮುಲ್ಲಸ್೯ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ಇಬ್ಬರು ಕರ್ತವ್ಯ ಮುಗಿಸಿ ಉಳ್ಳಾಲ ಬಂಗೇರ ಲೇನ್ ನಲ್ಲಿರುವ ಬಾಡಿಗೆ ಮನೆಗೆ ತೆರಳುವ ಸಂದರ್ಭ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿದೆ. ದಂಪತಿ ಇದ್ದ ಬೈಕ್ ಉಳ್ಳಾಲ ಕಡೆಗೆ ತಿರುಗುವ ಸಂದರ್ಭ ಅತಿ ವೇಗವಾಗಿ ತೊಕ್ಕೊಟ್ಟು ಫ್ಲೈಓವರ್ ಮೂಲಕ ಬಂದ ಲಾರಿ ಢಿಕ್ಕಿ ಹೊಡೆದು, ಇಬ್ಬರ ಮೇಲೂ ಚಲಿಸಿ ಕೆಲ ಮೀ. ದೂರಕ್ಕೆ ಎಳೆದುಕೊಂಡು ಹೋಗಿ ನಿಂತಿದೆ. ಘಟನೆಯಿಂದ ಪ್ರಿಯಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರಯಾನ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆಕ್ರೋಶಿತರು ಜಮಾಯಿಸಿದ್ದು, ಸಂಚಾರಿ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಓವರ್ ಬ್ರಿಡ್ಜ್ ಕೊನೆಗೊಳ್ಳುವ ಮೂಲೆಯಲ್ಲಿ ನಿಂತು ದಂಡ ವಿಧಿಸುವ ಪೊಲೀಸರು, ಫ್ಲೈಓವರ್ ನಲ್ಲಿ ನಿಂತು ವಾಹನಗಳ ವೇಗವನ್ನು ತಡೆಯುವಲ್ಲಿ ಪ್ರಯತ್ನಿಸುತ್ತಿಲ್ಲ ಅನ್ನುವ ಆರೋಪ ಸಾರ್ವಜನಿಕರು ಮಾಡಿದ್ದಾರೆ. ಈ ಬಗ್ಗೆ ಆಡಳಿತದಲ್ಲಿರುವವರಿಗೂ ಯಾವುದೇ ಚಿಂತೆ ಇಲ್ಲ ಎನ್ನುವಂತಾಗಿದ್ದು, ಹೆದ್ದಾರಿ ತಿರುವು ಸರಿ ಪಡಿಸಲು ಇನ್ನೆಷ್ಟು ಬಲಿ ಬೇಕು ಎಂಬುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊನೆಗೊಳ್ಳುವಲ್ಲಿಂದಲೇ ಉಳ್ಳಾಲಕ್ಕೆ ತೆರಳುವ ರಸ್ತೆಯ ತಿರುವು ಇದೆ. ಆದರೆ, ಇಲ್ಲಿ ಯಾವುದೇ ಸುರಕ್ಷಿತ ಕ್ರಮಗಳಿಲ್ಲ. ಮಂಗಳೂರಿನಿಂದ ತಲಪಾಡಿ ಕಡೆಗೆ ತೆರಳುವವರು ಫ್ಲೈ ಓವರ್ ಮೇಲಿನಿಂದ ವೇಗವಾಗಿ ಸಂಚರಿಸುತ್ತಾರೆ. ಅದೇ ರೀತಿಯಾಗಿ ಮಂಗಳೂರಿಗೆ ಬರುವವರೂ ಕೂಡ ವೇಗವಾಗಿಯೇ ಆಗಮಿಸುತ್ತಾರೆ. ಇಲ್ಲೇ ಮಂಗಳೂರಿನಿಂದ ಉಳ್ಳಾಲದತ್ತ ತೆರಳುವವರು ತಿರುವನ್ನು ಪಡೆದು ತೆರಳಬೇಕು. ಆದರೆ, ಇಲ್ಲಿ ಸಿಗ್ನಲ್ ಇಲ್ಲ. ಯಾವುದೇ ಎಚ್ಚರಿಕಾ ಕ್ರಮಗಳಿಲ್ಲ. ಇದರಿಂದಾಗಿ ಮತ್ತೆ ಮತ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ. ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದ್ದರೂ ಸಂಬಂಧಿಸಿದ ಜನ ನಾಯಕರು ಮಾತ್ರ ತುಟಿ ಪಿಟಿಕ್ ಅನ್ನುತ್ತಿಲ್ಲ. ಇದೇ ರಸ್ತೆಯನ್ನು ಬಳಸಿಕೊಂಡು ಕ್ಷೇತ್ರದ ಶಾಸಕರು ಕೂಡ ಸಂಚಾರ ನಡೆಸುತ್ತಿದ್ದಾರೆ. ಆದರೆ, ಅವೈಜ್ಞಾನಿಕ ತಿರುವಿನ ಬಗ್ಗೆ ಯಾವೊಬ್ಬರೂ ಕೂಡ ಮಾತನಾಡುತ್ತಿಲ್ಲ. ಇದುವೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.