ಬೈಕ್‌ಗೆ ಬಸ್ ಡಿಕ್ಕಿ: ಸವಾರ ಮೃತ್ಯು

ಮಂಜೇಶ್ವರ, ಎ.೧೯- ಬಸ್ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಹೊಸಂಗಡಿ ಪೇಟೆಯಲ್ಲಿ ಆದಿತ್ಯವಾರ ತಡರಾತ್ರಿ ನಡೆದಿದೆ.
ಪೈವಳಿಕೆ ಬೀಡುಬೈಲ್‌ನ ಶಶಿಧರ (೨೬) ಮೃತಪಟ್ಟವರು. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ. ತಲಪಾಡಿ ಕಡೆಯಿಂದ ಬರುತ್ತಿದ್ದ ಬೈಕ್ ಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಶಶಿಧರರನ್ನು ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಅವರು ಮೃತಪಟ್ಟಿದ್ದರು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾದ ಬಸ್ಸನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.