ಬೈಕ್‌ಗೆ ನಾಯಿ ಕಟ್ಟಿ ಎಳೆದೊಯ್ದು ಅಮಾನವೀಯ ವರ್ತನೆ: ಕೇಸ್ ದಾಖಲು


ಮಂಗಳೂರು, ಎ.೨೩- ನಗರ ಹೊರವಲಯದ ಸುರತ್ಕಲ್ ಸಮೀಪದ ಎನ್‌ಐಟಿಕೆ ರಾ.ಹೆ.ಯಲ್ಲಿ ಚಲಿಸುತ್ತಿದ್ದ ಬೈಕ್‌ಗೆ ನಾಯಿಯೊಂದನ್ನು ಕಟ್ಟಿ ಎಳೆದೊಯ್ಯುತ್ತಿರುವ ಘಟನೆ ಎ.೧೫ರಂದು ನಡೆದಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಭಾರೀ ಸುದ್ದಿಯಾಗಿದೆ.
ಈ ಅಮಾನವೀಯ ದೃಶ್ಯವನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿ ಅನಿಮಲ್ ಕೇರ್ ಟ್ರಸ್ಟ್ ಜೊತೆ ಹಂಚಿಕೊಂಡಿದ್ದಾರೆ. ಅದರಂತೆ ಈ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಲಾಗಿದೆ. ಎ.೧೫ರಂದು ರಾತ್ರಿ ಸುಮಾರು ೮:೩೦ಕ್ಕೆ ಬೈಕ್‌ನ ಹಿಂದೆ ಹಗ್ಗದಲ್ಲಿ ನಾಯಿಯನ್ನು ಕಟ್ಟಿ ಇಬ್ಬರು (ಅದರಲ್ಲಿ ಒಬ್ಬ ಲುಂಗಿ ಧರಿಸಿದ್ದ) ಸಾಗುತ್ತಿದ್ದರು. ಅದರ ಹಿಂದೆಯೇ ಇನ್ನೊಂದು ನಾಯಿ ಕೂಡಾ ಸ್ವಲ್ಪದೂರ ಓಡೋಡಿ ಬಂದಿದೆ. ಚಿತ್ರೀಕರಿಸಿದವರು ಹೈವೇಯಲ್ಲಿದ್ದರೆ ದುಷ್ಕರ್ಮಿಗಳು ಸರ್ವಿಸ್ ರಸ್ತೆಯಲ್ಲಿದ್ದರು. ಅಷ್ಟರಲ್ಲಿ ಸೇತುವೆ ಎದುರಾದ ಕಾರಣ ಆರೋಪಿಗಳು ತಕ್ಷಣ ತಪ್ಪಿಸಿಕೊಂಡಿದ್ದಾರೆ. ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ದೃಶ್ಯವನ್ನು ವೀಡಿಯೋ ಮಾಡಿದ್ದ ವ್ಯಕ್ತಿಯು ಆರಂಭದಲ್ಲಿ ಈ ವೀಡಿಯೋವನ್ನು ಬಹಿರಂಗ ಪಡಿಸಲು ಹಿಂಜರಿದ್ದು, ಬಳಿಕ ಅನಿಮಲ್ ಕೇರ್ ಟ್ರಸ್ಟ್‌ಗೆ ಕಳುಹಿಸಿದ್ದಾರೆ. ಇಬ್ಬರೂ ಆರೋಪಿಗಳ ಮುಖವೂ ವೀಡಿಯೊದಲ್ಲಿ ಸ್ಪಷ್ಟವಾಗಿ ಚಿತ್ರೀಕರಿಸಲ್ಪಟ್ಟಿದೆ. ಕೃತ್ಯಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದು ಶೀಘ್ರ ಬಂಧಿಸುವುದಾಗಿ ಡಿಸಿಪಿ (ಕಾನೂನು ಸುವ್ಯವಸ್ಥೆ) ಹರಿರಾಂ ಶಂಕರ್ ತಿಳಿಸಿದ್ದಾರೆ. ಈ ಘಟನೆ ಏಪ್ರಿಲ್ ೧೫ರ ರಾತ್ರಿ ಸುಮಾರು ೮.೩೦ರ ಸಮಯದಲ್ಲಿ ನಡೆದಿದೆ ಎನ್ನಲಾಗಿದೆ. ಉತ್ತರ ಕರ್ನಾಟಕದ ಮೂಲದ ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿರುವ ಇಬ್ಬರು ಈ ಕೃತ್ಯ ನಡೆಸಿರೋದಾಗಿ ಬೆಳಕಿಗೆ ಬಂದಿದೆ. ಈ ವೀಡಿಯೊ ನೋಡಿ ಪ್ರಾಣಿ ಪ್ರಿಯರೂ ಇದೀಗ ಸಿಡಿದೆದ್ದಿದ್ದು, ಮನುಷ್ಯತ್ವ ಇಲ್ಲದೆ ಈ ರೀತಿಯಾಗಿ ವರ್ತಿಸಿದವರನ್ನು ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ.