ಬೈಕ್‌ಗೆ ನಾಯಿ ಕಟ್ಟಿ ಎಳೆದೊಯ್ದ ಪ್ರಕರಣ: ಆರೋಪಿ ಬಂಧನ

ಮಂಗಳೂರು, ಎ.೨೪- ಬೈಕ್‌ಗೆ ನಾಯಿಯನ್ನು ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿ ಹಿಂಬದಿ ಸವಾರ ಕೊಪ್ಪಳ ಜಿಲ್ಲೆಯ ನೀಲಪ್ಪ(೩೦)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಎ.೧೭ರಂದು ರಾತ್ರಿ ಸುರತ್ಕಲ್ ಎನ್‌ಐಟಿಕೆ ಕಾಲನಿಯಿಂದ ರಸ್ತೆಯಲ್ಲಿ ಬೈಕ್‌ನ ಹಿಂಬದಿಗೆ ಹಗ್ಗದಲ್ಲಿ ಕಟ್ಟಿಹಾಕಿ ನಾಯಿಯನ್ನು ಎಳೆದುಕೊಂಡು ಹೋಗುವ ದೃಶ್ಯದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸಿದ್ದರು. ಈ ನಡುವೆ ವಿಡಿಯೋ ಮಾಡಿದವರು ವಿಳಂಬವಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದರು. ನಾಯಿ ಸತ್ತು ಹೋಗಿದ್ದ ಕಾರಣ ಅದನ್ನು ಹೂಳಲು ಹೀಗೆ ತೆಗೆದುಕೊಂಡು ಹೋಗಿದ್ದಾಗಿ ಬಂಧಿತ ಆರೋಪಿ ನೀಲಪ್ಪ ತಿಳಿಸಿದ್ದಾನೆ. ಆದರೆ ವಿಡಿಯೋ ಮಾಡಿದವರು, ನಾಯಿ ಸತ್ತಿರಲಿಲ್ಲ, ನರಳಾಡುತ್ತಿತ್ತು ಎಂದು ಸಾಕ್ಷ್ಯ ಹೇಳಿದ್ದಾರೆ. ಹಾಗಾಗಿ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಒಂದು ವೇಳೆ ನಾಯಿ ಸತ್ತಿದ್ದರೂ ಅಮಾನವೀಯ ರೀತಿಯಲ್ಲಿ ಹೀಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗುವುದು ತಪ್ಪು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಂಧಿತ ನೀಲಪ್ಪ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದು, ಇನ್ನೋರ್ವ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.