ಬೈಕ್‌ಗೆ ಕಾರು ಡಿಕ್ಕಿ: ಸವಾರ ಸಾವು

ತುಮಕೂರು, ಡಿ. ೮- ತವೇರಾ ಕಾರೊಂದು ದ್ವಿಚಕ್ರ ವಾಹನಕ್ಕೆ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಮೃತಪಟ್ಟಿರುವ ಯುವಕನನ್ನು ನಾಗವಲ್ಲಿ ಸಮೀಪದ ಗಡಗ ಗ್ರಾಮದ ಮುಸವಿರ್ ಪಾಷ (೨೩) ಎಂದು ಗುರುತಿಸಲಾಗಿದೆ.
ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ತವೇರಾ ಕಾರು ಮರಳೂರು ಕೆರೆ ಏರಿ ಮೇಲೆ ತುಮಕೂರು ಕಡೆಯಿಂದ ನಾಗವಲ್ಲಿ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪ್ಪಳಿಸಿ, ನಂತರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಂದಕಕ್ಕೆ ಉರುಳಿ ಬಿದ್ದಿದೆ. ಕಾರು ೨೦ ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದರಿಂದ ಅದರೊಳಗಿದ್ದ ಗಾಯಾಳುಗಳು ಅಪಘಾತ ನಡೆದ ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತ ನಡೆದ ಮರಳೂರು ಕೆರೆ ಏರಿ ಮೇಲೆ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಘಟನೆಯ ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಗಿತಗೊಂಡಿದ್ದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸುವಲ್ಲಿ ಶ್ರಮಿಸಿದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.