ಬೈಕ್‌ನಲ್ಲಿ ಮಗಳ ಶವ ಸಾಗಿಸಿದ ತಂದೆ

ಭೋಪಾಲ್,ಮೇ.೧೭- ಆಂಬುಲೆನ್ಸ್ ಸಿಗದ ಹಿನ್ನೆಲೆ ೧೩ ವರ್ಷದ ಮಗಳ ಮೃತದೇಹವನ್ನು ತಂದೆಯೊಬ್ಬ ಬೈಕಿನಲ್ಲೇ ಸಾಗಿಸಿದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಶಹದೋಲ್‌ನಲ್ಲಿ ನಡೆದಿದೆ.
ಕೋಟಾ ಗ್ರಾಮದ ನಿವಾಸಿಯಾದ ಲಕ್ಷ್ಮಣ್ ಸಿಂಗ್ ಎಂಬಾತನ ಮಗಳು ಮಾಧುರಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮಗಳು ಸಾವನ್ನಪ್ಪುತ್ತಿದ್ದಂತೆಯೇ ತಂದೆ ಲಕ್ಷ್ಮಣ್ ಸಿಂಗ್ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳಲ್ಲಿ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾರೆ.
ಈ ವೇಳೆ ಅಧಿಕಾರಿಗಳು ೧೫ ಕಿ.ಮಿ ಒಳಗಡೆ ಮಾತ್ರ ಅಂಬುಲೆನ್ಸ್ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ೧೫ ಕಿ.ಮೀಗಿಂತಲೂ ದೂರ ಕ್ರಮಿಸಬೇಕಾದರೆ ಹೆಚ್ಚಿನ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಮಗಳ ಶವವನ್ನು ಬೈಕಿನಲ್ಲಿಯೇ ಲಕ್ಷ್ಮಣ್ ಸಿಂಗ್ ಸಾಗಿಸಿದ್ದಾರೆ.
ಇನ್ನು ಈ ವಿಚಾರದ ತಿಳಿದ ಶಹದೋಲ್ ಕಲೆಕ್ಟರ್ ವಂದನಾ ವೈದ್ಯ ಅವರು ಮಗಳ ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ಯಲು ವಾಹನದ ವ್ಯವಸ್ಥೆ ಮಾಡಿದರು. ಹೀಗಾಗಿ ಅಂತಿಮ ವಿಧಿ-ವಿಧಾನಗಳಿಗಾಗಿ ಮಗಳ ದೇಹವನ್ನು ಮನೆಗೆ ಕೊಂಡೊಯ್ಯಲು ಸಾಧ್ಯವಾಯಿತು ಎಂದು ಸಿಂಗ್ ತಿಳಿಸಿದ್ದಾರೆ. ಅಲ್ಲದೆ ಶಹದೋಲ್ ಕಲೆಕ್ಟರ್, ಸಿಂಗ್ ಕುಟುಂಬಕ್ಕೆ ಸ್ವಲ್ಪ ಆರ್ಥಿಕ ನೆರವು ನೀಡಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.