ಬೈಕ್,ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಆಟೋ ಚಾಲಕರ ಪ್ರತಿಭಟನೆ

ಬೆಂಗಳೂರು,ಮಾ.೧೬- ನಗರದಲ್ಲಿ ರಾಪಿಡೋ ಸೇರಿದಂತೆ ವಿವಿಧ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಇಂದಿನಿಂದ ಸಾಂಕೇತಿಕವಾಗಿ ಆಟೋ ಚಾಲಕರು ತಮ್ಮ ವಾಹನಗಳಿಗೆ ಕಪ್ಪುಬಾವುಟ ಕಟ್ಟಿ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರದಿದ್ದರೆ ಸೋಮವಾರ ಆಟೋ ಸೇವೆ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಕಾನೂನು ಬಾಹಿರ ವೈಟ್‌ಬೋರ್ಡ್ ಟ್ಯಾಕ್ಸಿ ರದ್ದು ಮಾಡಬೇಕು ಎಂದು ಆಟೋ ಚಾಲಕ ಸಂಘಟನೆಗಳು ೩ ದಿನದ ಗಡುವು ನೀಡಿ ಇಂದಿನಿಂದ ಕಪ್ಪು ಬಾವುಟ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಬೈಕ್, ಟ್ಯಾಕ್ಸಿಗಳನ್ನು ನಿಷೇಧಿಸದಿದ್ದರೆ ಸೋಮವಾರ ಆಟೋ ಸೇವೆ ಬಂದ್ ಮಾಡಿ ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹಾಕುವುದಾಗಿ ಸಿಐಟಿಯು ಆಟೋ ರಿಕ್ಷಾ ಡ್ರೈವರ್‍ಸ್ ಯುನಿಯನ್ ಅಧ್ಯಕ್ಷ ಸಿ.ಎನ್ ಶ್ರೀನಿವಾಸ್ ಹೇಳಿದರು.
ಬೆಂಗಳೂರಿನಲ್ಲಿ ೨೧ ಆಟೋ ಚಾಲಕರ ಸಂಘಟನೆಗಳಿದ್ದು, ಎಲ್ಲ ಸಂಘಟನೆಗಳು ಈ ಬಂದ್‌ನಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ಹೇಳಿದರು.
ಕಳೆದ ೨ ವರ್ಷಗಳಿಂದ ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಆಟೋ ಚಾಲಕರ ಸಂಪಾದನೆ ಕಡಿಮೆಯಾಗುತ್ತಿದ್ದು, ಜೀವನ ನಡೆಸುವುದು ದುಸ್ತರವಾಗಿದೆ. ಆಟೋ ಚಾಲಕರಿಗೆ ಮಾರಕವಾಗಿರುವ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು.
ಆಟೋ ರಿಕ್ಷಾದವರು ನ್ಯಾಯಬದ್ದವಾಗಿ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ವಾಮಮಾರ್ಗದಿಂದ ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿರುವುದು ಎಷ್ಟು ಸರಿ?. ಹೀಗಾಗಿ ಹೀಗೆ ಬೈಕ್ ಸೇವೆ ನೀಡುತ್ತಿರುವ ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದರು.