ಬೈಕ್‍ಗೆ ಜೀಪ್ ಡಿಕ್ಕಿ:ಪತ್ನಿ ಸಾವು, ಪತಿ-ಪುತ್ರಿಗೆ ಗಾಯ

ಕಲಬುರಗಿ,ಮೇ.4-ಬೈಕ್‍ಗೆ ಬುಲೆರೋ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಪತಿ ಮತ್ತು ಪುತ್ರಿಗೆ ಗಂಭೀರ ಗಾಯಗಳಾದ ಘಟನೆ ನಗರದ ರಿಂಗ್ ರಸ್ತೆಯ ಬಾರೆಹಿಲ್ಸ್ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತ ಮಹಿಳೆಯನ್ನು ದರ್ಶನಾಪುರ ಲೇಔಟ್‍ನ ನಿವಾಸಿ ಪೂಜಾ ಮಲ್ಲಯ್ಯ ಮಠ (22) ಎಂದು ಗುರುತಿಸಲಾಗಿದೆ. ಪೂಜಾ ಅವರ ಪತಿ ಮಲ್ಲಯ್ಯ ಮಠ (33) , ಮಗಳು ಸುರಕ್ಷಾ (2) ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಣ್ಣೂರ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂಜಾ ಅವರ ಪತಿ ಮಲ್ಲಯ್ಯ ಮಠ ಅವರು ಜೆಸ್ಕಾಂನಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮೂಲತ: ಅಫಜಲಪುರ ತಾಲ್ಲೂಕಿನ ಹಸರಗುಂಡಗಿ ಗ್ರಾಮದವರಾಗಿದ್ದು, ದರ್ಶನಾಪುರ ಲೇಔಟ್‍ನಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.
ಇವರು ನಿನ್ನೆ ಮಧ್ಯಾಹ್ನ ಮನೆಶಾಂತಿ ಕಾರ್ಯಕ್ರಮ ಮುಗಿಸಿಕೊಂಡು ಬೈಕ್ ಮೇಲೆ ದರ್ಶನಾಪುರ ಲೇಔಟ್ ಕಡೆಗೆ ಹೋಗುತ್ತಿದ್ದಾಗ ಬುಲೆರೋ ಜೀಪ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.