ಬೇಸಿಗೆ: ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸೂಚನೆ

ಕಲಬುರಗಿ:ಮಾ.14:ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಹೀಟ್ ವೇವ್ (ಶಾಖದ ಹೊಡೆತ) ಸ್ಟೋಕ್‍ದಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುವ ಸಾಧ್ಯತೆಯಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಕಂಡ ಸಲಹೆಗಳನ್ನು ನೀಡಿದ್ದು, ಸಾರ್ವಜನಿಕರು ಇದನ್ನು ತಪ್ಪದೇ ಪಾಲಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

 ಸಾರ್ವಜನಿಕರು ಬಿಸಿಲು ದಿನಗಳಲ್ಲಿ ಕೊಡೆ/ಛತ್ರಿ ಬಳಸಿ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಸಬೇಕು.  ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಿ, ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಮಾಡಬೇಕು. ಹತ್ತಿಯ ಅಥವಾ ಟರ್ಬನ್ ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಧರಿಸಬೇಕು. ಹಿರಿಯ ನಾಗರಿಕರು, ಮಕ್ಕಳಿಗೆ ಹೆಚ್ಚು ನೀರು ಕುಡಿಯುಲು ಕೊಡಬೇಕು.

  ಪ್ರತಿದಿನ ಬೆಳ್ಳಿಗೆ 11 ರಿಂದ ಸಂಜೆ 4 ರವರೆಗೆ ಹೊರಾಂಗಣ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಸಾಕಷ್ಟು ನೀರು ಕುಡಿಯಬೇಕು. ಮಜ್ಜಿಗೆ ಮತ್ತು ಗ್ಲೂಕೋಸ್/ ಓ.ಆರ್.ಎಸ್. ನ್ನು ಹೆಚ್ಚಾಗಿ ಉಪಯೋಗಿಸಬೇಕು.  ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು (Use window, shades. Fanning and cross Ventilation)  ತೆಗೆದುಕೊಳ್ಳಬೇಕು. ಹೀಟ್ ಸ್ಟೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು. 

   ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಠ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು, ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು ಅಥವಾ ಐಸ್ ಪ್ಯಾಕ್ಗಳನ್ನು ಉಪಯೋಗಿಸಬಹುದು ಅಥವಾ ವ್ಯಕ್ತಿಯನ್ನು ಐಸ್ ಬ್ಲಾಕ್ಗಳ ಮಧ್ಯ ಇಡಬಹುದಾಗಿದೆ. ಹೀಟ್ ವೇವ್ ಸ್ಟೋಕ್‍ಗೆ ಒಳಗಾದ ವ್ಯಕ್ತಿಗೆ ಯಾವುದೇ ಸುಧಾರಣೆ ಕಂಡು ಬರದಿದ್ದರೆ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಬೇಕು.  ಬೇಸಿಗೆಯಲ್ಲಿ ಹೊರಗಿನಿಂದ ಬಂದ ತಕ್ಷಣ ನೀರು/ ಓ.ಆರ್.ಎಸ್/ ಮಜ್ಜಿಗೆಯಂತಹ ಪಾನೀಯಗಳನ್ನು ಬಳಸಬಹುದು. ತುರ್ತು ಸೇವೆಗಾಗಿ ಶುಲ್ಕ ರಹಿತ ಸಂಖ್ಯೆ 1077ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.