ಬೇಸಿಗೆ ಸಮಯ ಮೌಲ್ಯಯುತ ಸದ್ಭಳಕೆಗೆ ಬೇಸಿಗೆ ಶಿಬಿರ ಉಪಯೋಗವಾಗಲಿದೆ

ಚಿತ್ರದುರ್ಗ.ಮೇ.೧೬; ಬೇಸಿಗೆಯ ಸಮಯ ಮೌಲ್ಯಯುತವಾಗಿ ಸದ್ಭಳಕೆ ಮಾಡಿಕೊಳ್ಳಲು ಬೇಸಿಗೆ ಶಿಬಿರ  ಮಕ್ಕಳಿಗೆ ಉಪಯೋಗವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾ ಬಾಲಭವನ ಸಮಿತಿ ಕಾರ್ಯದರ್ಶಿ ಭಾರತಿ ಆರ್.ಬಣಕಾರ್ ಹೇಳಿದರು.ಜಿಲ್ಲಾ ಬಾಲಭವನ ಸಭಾಂಗಣದಲ್ಲಿ  ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 5 ರಿಂದ 16 ವರ್ಷ ಒಳಗಿನ ಮಕ್ಕಳಿಗೆ ಮೇ.15 ರಿಂದ 29 ರವರೆಗೆ ಏರ್ಪಡಿಸಿರುವ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂಗೀತ, ನೃತ್ಯ ತರಗತಿಗಳನ್ನು ಬಾಲಮಂದಿರಗಳ ಹಾಗೂ ಸರ್ಕಾರಿ ಶಾಲೆಯ ಮಕ್ಕಳು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಬಾಲ ಭವನ ಸೊಸೈಟಿ ಈ ಕಾರ್ಯಕ್ರಮವನ್ನು ಬೇಸಿಗೆ ರಜೆ ದಿನಗಳಲ್ಲಿ ಹಮ್ಮಿಕೊಂಡಿದ್ದು, ಮಕ್ಕಳು ಮೊಬೈಲ್ ಮತ್ತು ಟಿವಿಯ ಮುಂದೆ ಕುಳಿತು ಸಮಯ ಕಳೆಯಬಾರದು. ಬದಲಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಕಲೆ, ಸಾಹಿತ್ಯ, ಸಂಗೀತ ವಿಷಯಗಳನ್ನು ಬಾಲಭವನದ ಬೇಸಿಗೆ ಶಿಬಿರದಲ್ಲಿ ಕಲಿಯಲು ಸಹಕಾರಿಯಾಗುತ್ತದೆ ಎಂದರು.ಪ್ರತಿಭೆ ಅನಾವರಣಕ್ಕೆ ಅವಶ್ಯಕವಾಗಿ ಬೇಕಾದ ತರಬೇತಿಯನ್ನು  ಬಾಲ ಭವನದಲ್ಲಿ ನೀಡಲಾಗುತ್ತದೆ. ಬೇಸಿಗೆ ಶಿಬಿರ  ಹಾಗೂ ವಾರಾಂತ್ಯ ತರಗತಿ, ರಾಷ್ಟ್ರೀಯ ಹಬ್ಬಗಳಲ್ಲಿ ವಿವಿಧ ಸ್ಪರ್ಧೆ ಕಾರ್ಯಕ್ರಮಗಳನ್ನೂ ಸಹ ಮಾಡಲಾಗುತ್ತದೆ ಎಂದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧೀಕಾರಿ ಜೆ. ವೈಶಾಲಿ ಮಾತಾನಾಡಿ, ಶಿಬಿರಗಳು ನಾಯಕತ್ವ ಗುಣ ರೂಢಿಸಿಕೊಳ್ಳಲು , ಉನ್ನತ ಸ್ಥಾನಗಳಿಗೆ ಬೆಳೆಯಲು ಸಹಕಾರಿಯಾಗಿವೆ ಎಂದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಗದೀಶ್ ಅವರು ಸಸಿಗೆ ನೀರು ಹಾಕುವ ಮೂಲಕ ಹಾಗೂ ಕೆಕ್ ಕತ್ತರಿಸುವ ಮೂಲಕ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಎಲ್ಲಾ ಮಕ್ಕಳಿಗೂ ಶುಭ ಕೋರಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಕೆಂಪ ಹನುಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಸರ್ಕಾರಿ ಬಾಲಕರ ಬಾಲಮಂದಿರ ಅಧೀಕ್ಷಕಿ ಜ್ಯೋತಿ, ಯೋಗ ಶಿಕ್ಷಕ ಎಂ.ತಿಪ್ಪೇಸ್ವಾಮಿ, ಕಲಾ ಶಾಲೆಯ ಸಂಸ್ಥಾಪಕಿ ಭಾರ್ಗವಿ, ಚಿತ್ರಕಲಾ ಶಿಕ್ಷಕಿ ಜಯಶೀಲಾ, ಸಂಪನ್ಮೂಲ ವ್ಯಕ್ತಿ ಕೆ.ಪವಿತ್ರ, ಜಿಲ್ಲಾ ಬಾಲಭವನ ಅಧೀಕ್ಷಕ ರಜಾಕ್ ಸಾಬ್, ಸರ್ಕಾರಿ ಬಾಲಕಿಯರ ಬಾಲಮಂದಿರ ಅಧೀಕ್ಷಕಿ ಸುನೀತಾ, ಕಾರ್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ ಇದ್ದರು.