
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 20 :- ಗ್ರಾಮೀಣ ಭಾಗದ ಮಕ್ಕಳಿಗೂ ಸಹ ಬೇಸಿಗೆ ಶಿಬಿರದಂತಹ ಪ್ರಯೋಜನಗಳು ಸಿಗುವಂತಾಗಬೇಕು ಎಂದು ಹುಡೇo ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಬಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಹುಡೇಂ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಿಂದ ಆಯೋಜಿಸಿರುವ ಗ್ರಾಮೀಣ ಮಕ್ಕಳ ಬೇಸಿಗೆ ಉಚಿತ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡುತ್ತಾ ಪಾಲಕರು ತಮ್ಮ 13 ವರ್ಷದೊಳಗಿನ ಮಕ್ಕಳನ್ನು ಶಿಬಿರಕ್ಕೆ ಸೇರಿಸುವುದರಿಂದ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಬಹುದಾಗಿದೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಿಂದ ಒಂದು ವಾರ ನಡೆಯುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಹಾಡು, ಕಲಿಕೆ ಸೇರಿ ಮನರಂಜನೆಯ ಮೂಲಕ ಶಿಕ್ಷಣ ಕಲಿಕೆಗೆ ಆಸಕ್ತಿ ವಹಿಸುವಂತಾಗಲಿ ಎಂದು ತಿಳಿಸಿದರು.
ಗ್ರಂಥಾಲಯ ಮೇಲ್ವಿಚಾರ ಟಿ ಗುರುರಾಜ್ ಮಾತನಾಡಿ, ಗ್ರಂಥಾಲಯ ಇಲಾಖೆಯ ಆದೇಶದಂತೆ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ 8 ರಿಂದ 13 ವರ್ಷದೊಳಗಿನ ಮಕ್ಕಳಿಗೆ ಉಚಿತ ನೋಂದಣಿ ಇರಲಿದೆ. ಅಲ್ಲದೆ, ಈ ಶಿಬಿರವು ಮೇ 27 ರವರೆಗೆ ನಡೆಯುತ್ತಿದ್ದು, ಶಿಬಿರದ ಪ್ರಯೋಜನ ಪಡೆಯಲು ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕ ವೀರೇಶ್, ಮುಖಂಡ ಕೋಣನವರ ಮಲ್ಲಿಕಾರ್ಜುನಪ್ಪ, ಗ್ರಾಪಂ ಸಿಬ್ಬಂದಿ ದಕ್ಷಿಣಮೂರ್ತಿ, ಮಲಿಯಪ್ಪ ಇತರರಿದ್ದರು. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಶಿಕ್ಷಕ ವೀರೇಶ್ ಅವರು ಕಥೆ ಹೇಳಿದರು. ಅಲ್ಲದೆ, ಮಕ್ಕಳಿಂದ ಹಾಡು ಹಾಡಿಸಲಾಯಿತು.