
ಕೋಲಾರ.ಏ.೫- ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ, ಎರಡನ್ನೂ ಸಮಾನವಾಗಿ ನೋಡಬೇಕು ಎಂದು ಕೋಲಾರ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ತಿಳಿಸಿದರು.
ನಗರದ ಸ್ಕೌಟ್ ಭವನದಲ್ಲಿ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ರೋಟರಿ ಕೋಲಾರ ನಂದಿನಿ ವತಿಯಿಂದ ಆಯೋಜಿಸಿದ್ದ ಸ್ಕೌಟ್ಸ್ ಗೈಡ್ಸ್ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಮಕ್ಕಳು ಪೋಷಕರ ಮೋಬೈಲ್ ಗಳನ್ನು ಹೆಚ್ಚು ಬಳಸುವ ಮೂಲಕ ತಮ್ಮ ಕಣ್ಣುಗಳಿಗೆ ತೊಂದರೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದರು.
ರಜೆಯ ದಿನಗಳನ್ನು ಸಾರ್ಥಕಪಡಿಸಿಕೊಳ್ಳಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿದ್ದು, ನಮ್ಮ ಸಂಸ್ಥೆಯ ಶಿಬಿರಗಳಲ್ಲಿ ಜೀವನ ಕೌಶಲಗಳ ಜೊತೆಗೆ ವಿದ್ಯಾರ್ಥೀಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡಿದ್ದು ಈ ಶಿಬಿರದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಬೇಕು, ಇಂತಹ ಶಿಬಿರಗಳು ಮಕ್ಕಳಿಗೆ ಸಿಗಬೇಕಾದರೆ ಪೋಷಕರ ಸಹಕಾರ ಮತ್ತು ಮಾರ್ಗದರ್ಶನ ಅತ್ಯಗತ್ಯ ಎಂದು ತಿಳಿಸಿದರು.
ಜಿಲ್ಲಾ ಗೈಡ್ಸ್ ಆಯುಕ್ತರಾದ ಕೆ.ಆರ್.ಜಯಶ್ರೀ ರವರು ಮಾತನಾಡಿ ನಮ್ಮ ಕೋಲಾರ ಜಿಲ್ಲಾ ಸಂಸ್ಥೆ ಕಳೆದ ೧೧ ವರ್ಷಗಳಿಂದ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡುತ್ತಾ ಬಂದಿದೆ, ಕಳೆದ ವರ್ಷ ರಾಜ್ಯಾಂದ್ಯಂತ ಬೇಸಿಗೆ ಶಿಬಿರಗಳನ್ನು ಆಯೋಜನೆ ಮಾಡಲು ರಾಜ್ಯ ಸಂಸ್ಥೆ ನಿರ್ಧರಿಸಿ , ಇಲಾಖೆಯಿಂದ ಆದೇಶ ಹೊರಡಿಸಿದೆ. ಎಲ್ಲಾ ಶಾಲೆಗಳಲ್ಲಿ ಬೇಸಿಗೆ ಶಿಬಿರಗಳು ನಡೆಸಲು ಇಲಾಖೆಯಿಂದ ಉತ್ತಮ ಸಹಕಾರ ಸಿಗುತ್ತಿದೆ. ತರಬೇತಿ ಪಡೆದ ಎಲ್ಲಾ ಶಿಕ್ಷಕರು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಶಿಬಿರಗಳನ್ನು ಹಮ್ಮಿಕೊಂಡು ಸ್ಕೌಟ್ಸ್ ಗೈಡ್ಸ್ ಚಳುವಳಿಗೆ ಮತ್ತಷ್ಟು ಹೊಸ ಮುಖಗಳ ಪರಿಚಯವಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ ರವರು ಮಾತನಾಡಿ ಶಿಬಿರದಲ್ಲಿ ಕಲಿಸಿದ ಅಂಶಗಳನ್ನು ಶಿಬಿರ ಮುಗಿದ ನಂತರ ಅಭ್ಯಾಸ ಮಾಡುತ್ತಾ ತಮ್ಮ ನೆರೆಹೊರೆಯ ಸ್ನೇಹಿತರ ಬಳಿ ಕಲಿಕಾಂಶಗಳನ್ನು ಹಂಚಿಕೊಳ್ಳಬೇಕು, ಸ್ಕೌಟ್ಸ್ ಗೈಡ್ಸ್ ಸಂಸ್ಥೆ ೧೧೭ ಕ್ಕೂ ಹೆಚ್ಚು ವರ್ಷಗಳಿಂದ ಶಾಲಾ ಮಕ್ಕಳಲ್ಲಿ ನಾಯಕತ್ವ ಗುಣಗಳು, ವಿಶ್ವ ಸಹೋದರತೆ, ಪರಿಸರ ಪ್ರೇಮಿ, ಸೇವಾ ಮನೋಭಾವ ಮುಂತಾದ ಗುಣಗಳನ್ನು ಬೆಳಸಲು ಶಿಬಿರಗಳನ್ನು ಆಯೋಜಿಸುತ್ತಿದ್ದು , ಶಾಲಾ ಮಕ್ಕಳು ಹೆಚ್ಚಿನ ಲಾಭವನ್ನು ಪಡೆಯಬೇಕು ಎಂದು ತಿಳಿಸಿದರು.