ಬೇಸಿಗೆ ಶಿಬಿರಗಳು ಪರಿಸರ ಪ್ರಜ್ಞೆ ಬೆಳೆಸಲಿ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.14:- ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಒತ್ತು ನೀಡಬೇಕು. ಆ ಮೂಲಕ ಗಿಡಮರಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಕವಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ತಾಲ್ಲೂಕಿನ ಮೆಲ್ಲಹಳ್ಳಿ-ಹಾರೋಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್.ಎಲ್.ಹೆಚ್.ಪಿ. ಸ್ವಯಂ ಸೇವಾ ಸಂಸ್ಥೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಎರಡೂ ಸರ್ಕಾರಿ ಶಾಲಾ ಮಕ್ಕಳಿಗೆ ಆಯೋಜಿಸಿರುವ ಹತ್ತು ದಿನಗಳ ಕಾಲದ ‘ಬೇಸಿಗೆ ಶಿಬಿರ’ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯ ಮೇಲೆ ದಿನೇ ದಿನೇ ಶೋಷಣೆ ಹೆಚ್ಚುತ್ತಿದೆ. ಇದರಿಂದಾಗಿ ಭೂಮಿಯ ವಿಪರೀತ ತಾಪಮಾನ ಏರಿದೆ. ಮಳೆಯ ಪ್ರಮಾಣವೂ ತಗ್ಗಿದೆ. ಬರಗಾಲ ಬಾರದಂತೆ ತಡೆಯಲು ಗಿಡಗಳ ನೆಡುವ ಮತ್ತು ಪೆÇೀಷಿಸುವ ಕಾರ್ಯಕ್ಕೆ ಮಕ್ಕಳ ತೊಡಗಿಸಿ, ಅವರಲ್ಲಿ ‘ಪರಿಸರ ಪ್ರೀತಿ’ಯ ಜಾಗೃತಗೊಳಿಸಿ ಉತ್ತೇಜಿಸಬೇಕಿದೆ ಎಂದರು.
ಕೇವಲ ಮನೋರಂಜನೆ ಕೊಡುವುದಷ್ಟೇ ಬೇಸಿಗೆ ಶಿಬಿರಗಳ ಉದ್ದೇಶವಾಗಬಾರದು. ಕಲೆ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಸ್ವಚ್ಚತೆ, ಆರೋಗ್ಯ, ನೀರಿನ ಮಿತಬಳಕೆ ಮತ್ತು ಸಂರಕ್ಷಣೆಯ ಕುರಿತು ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಹಾರೋಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಬಿ. ಶೆಟ್ಟಿ ಮಾತನಾಡಿ, ನಗರಗಳಲ್ಲಿ ಬೇಸಿಗೆ ಶಿಬಿರಕ್ಕೆ ಸಾವಿರಾರು ರೂಗಳ ಶುಲ್ಕ ಪಾವತಿ ಮಾಡಬೇಕು. ಆದರೆ, ನಾವು ಗ್ರಾಮೀಣ ಮಕ್ಕಳಿಗೂ ಬೇಸಿಗೆ ಶಿಬಿರದ ಪ್ರಯೋಜನ ಲಭಿಸಲೆಂದು ಪ್ರತಿದಿನ ವಿಶೇಷ ಊಟೋಪಚಾರದ ಜೊತೆಗೆ ಉಚಿತ ಶಿಬಿರ ಆಯೋಜಿಸಿದ್ದು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮೆಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ . ವೇದಿಕೆಯಲ್ಲಿ ಶಿಕ್ಷಕಿಯರಾದ ಲೀನಾ ಡಿಸೋಜ, ಶುಭ ಹಾಗೂ ಆರ್.ಎಲ್.ಹೆಚ್.ಪಿ. ಸಂಸ್ಥೆಯ ಸರಸ್ವತಿ ಉಪಸ್ಥಿತರಿದ್ದರು.
‘ಆರೋಗ್ಯ ಮತ್ತು ಪರಿಸರ ಸಂರಕ್ಷಣೆ’ಯ ವಿಚಾರದಡಿಯಲ್ಲಿ ದಶದಿನಗಳ ಕಾಲ ಈ ಬೇಸಿಗೆ ಶಿಬಿರವು ಸರ್ಕಾರಿ ಶಾಲಾ ಮಕ್ಕಳಿಗೆ ನಡೆಯಲಿದೆ.