ಬೇಸಿಗೆ ಬಂತು ಪಶು-ಪಕ್ಷಿಗಳಿಗೆ ನೀರುಣಿಸಿ

ಬೀದರ:ಪಶು-ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು ಅವು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಮನುಷ್ಯ ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತನಾಗಿದ್ದಾನೆ. ನಾವು ಆರೋಗ್ಯದಿಂದ ಬದುಕಲು ಪ್ರಾಣಿ-ಪಕ್ಷಿ, ಗಿಡ, ಮರ, ಕಾಡುಗಳು ನಮಗೆ ಅತ್ಯಾವಶಕವಾಗಿವೆ. ಭಾರತದ ಇತಿಹಾಸ ಪರಂಪರೆಯಲ್ಲಿ ಪ್ರಾಣಿ, ಪಕ್ಷಿ, ಮರಗಳು ಹಾಗೂ ನದಿಗಳನ್ನು ಪೂಜ್ಯನೀಯ ಮತ್ತು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಸ್ವಚ್ಚಂದವಾಗಿ ಆಕಾಶದಲ್ಲಿ ಚಿಲಿಪಿಲಿ ಗುಡುತ್ತ ಹಾರಾಡುವ ಹಕ್ಕಿಗಳನ್ನು ನಾವು ಕಾಣುತ್ತೇವೆ. ಪ್ರತಿಯೊಂದು ಪಕ್ಷಿಗಳಿಗೆ ತನ್ನದೇಯಾದ ವಿಶೇಷತೆಯಿದೆ, ನವೀಲನ್ನು ಪಕ್ಷಿಗಳ ಹಾಜ ಎಂದು ಕರೆದರೆ ಕಾಗೆಯನ್ನು ಅತಿಥಿ ಆಗಮನದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹಂಸ ಪಕ್ಷಿಯು ದೈವಿಕ ಆತ್ಮಗಳಿಗೆ ಆಶ್ರಯವನ್ನು ನೀಡುವ ಪ್ರಕ್ಷಿ ಎನ್ನಲಾಗುತ್ತದೆ. ಗರುಡ ಪಕ್ಷಿಯನ್ನು ಪಕ್ಷಿಗಳ ರಾಜ ಎಂದು ಕರೆದರೆ ಪಾರಿವಾಳವನ್ನು ಶಾಂತಿಯ ಸಂಕೇತವಾಗಿದೆ ಹೀಗೆ ವಿವಿಧ ಪಕ್ಷಿಗಳು ತನ್ನದೇ ಆದ ವಿಶೇಷತೆಗಳನ್ನು ಹೊಂದಿವೆ.

ಭಾರತದಲ್ಲಿ ವನ್ಯಜೀವಿಗಳು ಶೇ.25 ರಷ್ಟಿದ್ದು, ಕರ್ನಾಟಕದಲ್ಲಿ 30 ವನ್ಯಜೀವಿ ಆಭಯಾರಣ್ಯಗಳು ಮತ್ತು 16 ಸಂರಕ್ಷಿತ ಮೀಸಲು ಪ್ರದೇಶ ಸೇರಿದಂತೆ 5 ರಾಷ್ಟ್ರೀಯ ಉದ್ಯಾನವನಗಳಿದ್ದು, ಕರ್ನಾಟಕದ ಕಾಡುಗಳಲ್ಲಿ ಸುಮಾರು 600 ವಿವಿಧ ಜಾತಿಯ ವೈವಿದ್ಯಮಯ ಪಕ್ಷಿಗಳನ್ನು ನೋಡಬಹುದಾಗಿದೆ. ಭಾರತದಲ್ಲಿ ಕಂಡು ಬರುವ ಶೇ.35 ಕ್ಕಿಂತ ಹೆಚ್ಚಿನ ಪಕ್ಷಿ ಪ್ರಬೇಧಗಳು ಇಲ್ಲಿ ನೆಲೆಯಾಗಿವೆ. ಕರಾವಳಿ ಪಶ್ಚಿಮ ಘಟ್ಟಗಳು ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಈ ಪ್ರದೇಶಗಳು ವಲಸೆ ಹಕ್ಕಿಗಳಿಗೆ ತಾಣವಾಗಿವೆ. ಕರ್ನಾಟಕದಲ್ಲಿ 8 ಜನಪ್ರೀಯ ಪಕ್ಷಿಧಾಮಗಳು ನೋಡಸಿಗುತ್ತವೆ. ಅವುಗಳೆಂದರೆ ಕೊಕ್ಕರೆ ಬೆಳ್ಳೂರು, ಗುಡವಿ, ಆದಿಚುಂಚನಗಿರಿ, ಭೋನಲ್, ದಾಂಡೇಲಿಯ ಹಾನ್ರ್ಬಿಲ್, ರಂಗನತಿಟ್ಟು, ಘಟಪ್ರಭಾ ಪಕ್ಷಿಧಾಮ, ಅತ್ತಿವೇರಿ ಇವು ಪಕ್ಷಿಗಳ ನೆಲೆಯಾಗಿವೆ.

ಗುಬ್ಬಚ್ಚಿ, ಗಿಣಿ, ಪಾರಿವಾಳ, ಕಾಗೆ, ಹದ್ದು, ಅಳಿಲು, ನವಿಲು, ಗುಟುರು ಹಕ್ಕಿಗಳು ಸೇರಿದಂತೆ ಹಲವಾರು ಪಕ್ಷಿಗಳಿಗೆ ಬೇಸಿಗೆ ಬಾದಿಸುತ್ತದೆ. ಅವುಗಳಿಗೆ ಆಹಾರವಿಲ್ಲದಿದ್ದರು ನಡೆಯುತ್ತದೆ ಆದರೆ ನೀರಿಲ್ಲದೆ ಅವು ಬದುಕಲಾರವು ಹಾಗಾಗಿ ಮನೆಯ ಹಿತ್ತಲಿನ ಕೈತೋಟ, ಕಛೇರಿ, ಹೊಲ-ಗದ್ದೆಯ ಗಿಡ ಮರಗಳ ಟೊಂಗೆಗಳಿಗೆ ನೀರಿನ ಅರೆವಟ್ಟಿಗೆಗಳನ್ನು ಕಟ್ಟಿ ಅವುಗಳಿಗೆ ನೀರುಣಿಸಿದರೆ ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಬೇಸಿಗೆ ಆರಂಭವಾಗಿರುವುದರಿಂದ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಪಕ್ಷಿಗಳ ಜೀವಕ್ಕೆ ಆಪತ್ತು ಎದುರಾಗುತ್ತದೆ. ಅವುಗಳಿಗೆ ಕುಡಿಯಲು ನೀರು ಸಿಗದಿದ್ದರೆ ಬಳಲಿಕೆಗೆ ಕಾರಣವಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನು ಬಿಸಿಲಿನ ಪ್ರಖರತೆ ಹೆಚ್ಚಿರಲಿದ್ದು, ಬಿಸಿಲ ಝಳದಿಂದ ಬಳಲಿ ನೀರು ಸಿಗದಿದ್ದರೆ ಪ್ರಾಣಿ-ಪಕ್ಷಿಗಳು ತಮ್ಮ ಪ್ರಾಣವನ್ನೆ ಕಳೆದುಕೊಳ್ಳುತ್ತವೆ.

ಮನುಷ್ಯರಾದ ನಾವುಗಳು ನಮಗೆ ನೀರಿನ ಸಮಸ್ಯೆಗಳಾದರೆ ಇತರರ ಮುಂದೆ ಹೇಳಿಕೊಳ್ಳುತ್ತೆವೆ. ಆದರೆ ಮಾತುಬಾರದ ಆ ಮೂಕ ಪ್ರಾಣಿ-ಪಕ್ಷಿಗಳು ಯಾರಿಗೆ ತಾನೆ ತಮ್ಮ ಯಾತನೆ ಹೇಳಬೇಕು. ಅವುಗಳ ಬಾಷೆ ನಮಗೆ ಅರ್ಥ ಆಗುವುದೆ? ಪ್ರಾಣಿ ಪ್ರಪಂಚದಲ್ಲಿಯೆ ಶ್ರೇಷ್ಠ ಪ್ರಾಣಿಯಾದ ಮಾನವ ಅವುಗಳ ರೋಧನವನ್ನು ಅರ್ಥಮಾಡಿಕೊಂಡು ಅವುಗಳಿಗೆ ನೀರುಣಿಸಬೇಕು. ಬೇಸಿಗೆ ಬಂತೆಂದರೆ ಸಾಕು ಭೂಮಿಯಲ್ಲಿ ನೀರಿನಮಟ್ಟ ತಾನಾಗಿಯೆ ಕಡಿಮೆಯಾಗುತ್ತದೆ. ಇದರಿಂದ ಕೆರೆ, ಹಳ್ಳ, ಕೊಳ್ಳ, ಭಾವಿಗಳಲ್ಲಿಯೂ ನೀರು ಕಡಿಮೆಯಾಗಿ ನೀರಿನ ಆಹಾಕಾರ ಎಲ್ಲೆಡೆ ಕಂಡುಬರುವದನ್ನು ನಾವು ಕಾಣುತ್ತೆವೆ. ಪಶು, ಪ್ರಾಣಿ, ಪಕ್ಷಿಗಳು ಈ ಸಂದರ್ಭದಲ್ಲಿ ನೀರಿಗಾಗಿ ಪರಿತಪ್ಪಿಸುತ್ತಾ ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಲಾಯನ ಮಾಡುತ್ತವೆ.

ಬೇಸಿಗೆಯ ಸಂದರ್ಭದಲ್ಲಿ ಜನರಿಗೆ ನೀರಿನ ತೊಂದರೆಯಾಗದಂತೆ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ತಾಲ್ಲೂಕ ಆಡಳಿತ ಮತ್ತು ಗ್ರಾಮ ಪಂಚಾಯತಗಳು ಹಲವಾರು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ನೀರಿನ ಮೂಲವಿಲ್ಲದ ಕೆಲವೊಂದು ಗ್ರಾಮಗಳಲ್ಲಿ ಟ್ಯಾಂಕರ ಮೂಲಕವು ಜನರಿಗೆ ನೀರನ್ನು ಒದಗಿಸುವುದನ್ನು ನಾವು ಕಾಣುತ್ತೆವೆ. ನೀರು ಜೀವಜಲ, ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ಅನ್ನ ಹಾಗೂ ಗಾಳಿಯಷ್ಟೇ ನೀರು ಸಹ ಪ್ರಾಮುಖ್ಯವಾಗಿದೆ. ಹನಿ-ಹನಿ ಸೇರಿದರೆ ಹಳ್ಳ ಎನ್ನುವಂತೆ ಬೇಸಿಗೆಯಲ್ಲಿ ಒಂದು ಹನಿ ನೀರು ನಮಗೆ ಅತ್ಯಮೂಲ್ಯವಾಗಿದೆ. ಹಾಗಾಗಿ ನಳ/ನಲ್ಲಿ, ಬೋರವೆಲ್, ಕಾಲುವೆ, ಕೆರೆ ಅಥವಾ ಯಾವುದೇ ನೀರಿನ ಮೂಲಗಳಲ್ಲಿ ಅನಾವಶ್ಯಕವಾಗಿ ನೀರು ನಷ್ಟವಾಗಿ ಹರಿದು ಹೋಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೇ ಸ್ಥಳದಲ್ಲಿ ನೀರು ಅನಾವಶ್ಯಕವಾಗಿ ಹರಿದು ಹೋಗುತ್ತಿದ್ದರೆ, ಸಂಬಂಧಪಟ್ಟವರ ಗಮನಕ್ಕೆ ತಂದು ಅದನ್ನು ಪೆÇೀಲಾಗದಂತೆ ತಡೆಯುವ ಮೂಲಕ ಈ ಬೇಸಿಗೆಯಲ್ಲಿ ಯಾವುದೇ ನೀರಿನ ಸಮಸ್ಯೆಗಳಾಗದಂತೆ ನೋಡಿಕೊಳ್ಳುವುದರ ಜೊತೆಗೆ ನಮ್ಮ ಆರೋಗ್ಯದ ಬಗ್ಗೆಯೂ ಒಂದಿಷ್ಟು ಕಾಳಜಿ ವಹಿಸಬೇಕು. ಅನಾವಶ್ಯಕವಾಗಿ ಹೊರಗಡೆ ಹೋಗಬಾರದು, ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಗಡೆ ಹೋಗಬೇಕು. ಈ ಬೇಸಿಗೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಬಿಸಿಲಿನ ಪ್ರಕರತೆ ಹೆಚ್ಚಾಗಿರುತ್ತದೆ. ವಿಶೇಷವಾಗಿ ವೃದ್ಧರು, ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಣ್ಣು, ತರಕಾರಿ ಮತ್ತು ತಂಪು ಪಾನೀಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು.

ಬೇಸಿಗೆ ಸಂದರ್ಭದಲ್ಲಿ ಕಾಡುಗಳಿಗೆ ಬೆಂಕಿ ಬೀಳುತ್ತಿರುವದನ್ನು ನಾವು ಪ್ರತಿ ವರ್ಷ ಒಂದಲ್ಲ ಒಂದು ಕಡೆ ನೋಡುತ್ತಲೆ ಇದ್ದೇವೆ. ಯಾರು ಕಾಡುಗಳಿಗೆ ಬೆಂಕಿ ಇಡುವ ಕೆಲಸ ಮಾಡಬಾರದು. ಕಾಡು ನಮ್ಮ ಜೀವನದ ಉಸಿರು ಅದು ನಮಗೆ ಪರಿಶುದ್ದ ಗಾಳಿಯನ್ನು ನೀಡುವದು ಮಾತ್ರವಲ್ಲ ನಮ್ಮ ಪರಿಸರ ಸಮತೋಲನವನ್ನು ಕಾಪಾಡುತ್ತದೆ. ಅದರ ಮಡಿಲಿನಲ್ಲಿ ಸಾವಿರಾರು ಪ್ರಾಣಿ-ಪಕ್ಷಿಗಳು ಜೀವಿಸುತ್ತಿರುತ್ತವೆ. ಕಾಡುಗಳಿಗೆ ಬೆಂಕಿ ಬಿದ್ದಾಗ ಕಾಡು ಮಾತ್ರವಲ್ಲ ಅದರಲ್ಲಿರುವ ಸಾವಿರಾರು ಪ್ರಾಣಿ-ಪಕ್ಷಿಗಳು ತಮ್ಮ ಜೀವ ಕಳೆದುಕೊಳ್ಳುತ್ತವೆ ಮತ್ತು ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಲಾಯನ ಮಾಡುತ್ತವೆ ಹಾಗಾಗಿ ಅದಕ್ಕೆ ಬೆಂಕಿ ಹಚ್ಚುವ ಕಲಸ ಮಾಡಬಾರದು. ಬೇಸಿಗೆ ಸಂದರ್ಭದಲ್ಲಿ ಕಾಡಿನಲ್ಲಿ ನೀರಿನ ಸಮಸ್ಯೆ ಉಂಟಾಗಿ ಪ್ರಾಣಿ-ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಾ ಇರುತ್ತವೆ.

ಕಾಡಿಗೆ ಬೆಂಕಿ ಬೀಳದಂತೆ ಅದರ ಸಂರಕ್ಷಣೆ ಮಾಡುವದು ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ ಆ ಕಾಡಿನ ಅಕ್ಕ-ಪಕ್ಕದ ಗ್ರಾಮಗಳು ಮತ್ತು ಅಲ್ಲಿನ ಜನರ ಜವಾಬ್ದಾರಿಯೂ ಅಷ್ಟೆ ಆಗಿದೆ ಎಂದರೆ ತಪ್ಪಾಗಲಾರದು. ಕಾಡಿನ ಸಂಪತ್ತು ನಮ್ಮ ನಿಮ್ಮೆಲ್ಲರ ಸಂಪತ್ತಾಗಿದ್ದು, ಕಾಡು ಬೆಳೆಸಿ ನಾಡು ಉಳಿಸಿ. “ಮನೆಗೊಂದು ಮಗು, ಮಗುವಿಗೊಂದು ಮರ” ಎಂಬ ಘೋಷ-ವಾಕ್ಯಗಳನ್ನು ಕೇಳುತ್ತಲೆ ಇದ್ದೇವೆ. ಪ್ರತಿ ವರ್ಷ ಕಾಡಿನಲ್ಲಿ ಇಂಥ ಅವಘಡಗಳು ನಡೆಯದಂತೆ ಮುಂಜಾಗ್ರತೆಯಾಗಿ ಅರಣ್ಯ ಇಲಾಖೆಯು ಕಾಡಿನ ಅಕ್ಕ-ಪಕ್ಕದ ಗ್ರಾಮಗಳ ಜನರಲ್ಲಿ ಕಾಡಿನ ಮಹತ್ವ ಮತ್ತು ಅದರ ಹಾನಿಯಿಂದ ಪರಿಸರದ ಮೇಲಾಗುವ ದುಷ್ಪರೀಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು ಅವಶ್ಯಕತೆ ಇದೆ.

ಈ ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಕಾರ್ಯವನ್ನು ಪರಿಸರ ಪ್ರೇಮಿಗಳು ಪ್ರಾಣಿ ದಯಾ ಸಂಘಟನೆಗಳು ಬಂಡೀಪುರ ಅಭಯಾರಣ್ಯದಂತ ಪ್ರದೇಶಗಳಲ್ಲಿಯೂ ಪ್ರಾಣಿ ಪಕ್ಷಿಗಳಿಗೆ ನೀರನ್ನು ಹಾಕುವ ಕೆಲಸ ಮಾಡುತ್ತವೆ. ಈ ಕಾರ್ಯ ಸರ್ಕಾರ ಮತ್ತು ಪ್ರಾಣಿದಯಾ ಸಂಘಟನೆಗಳು ಮಾಡಿದರೆ ಸಾಲದು ಸಾರ್ವಜನಿಕರಾದ ನಾವು ನಮ್ಮ ಪ್ರಕೃತಿ, ಪಶು, ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವ ಪೀಳಿಗೆಗೆ ನಾವು ಇವುಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಿದೆ ಇಲ್ಲದಿದ್ದರೆ ನಮ್ಮ ಮುಂದಿನ ಯುವ ಜನಾಂಗಕ್ಕೆ ಈ ಪ್ರಾಣಿ ಪಕ್ಷಿಗಳನ್ನು ಚಿತ್ರಗಳಲ್ಲಿ ತೋರಿಸಬೇಕಾಗುತ್ತದೆ. ಹಾಗಾಗಿ ಈ ಬೇಸಿಗೆಯಲ್ಲಿ ನಾವೆಲ್ಲರೂ ಪಶು, ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಒಳ್ಳೆಯ ಕಾರ್ಯ ಮಾಡೋಣ.

ಜಿ.ಸುರೇಶ
ಸಹಾಯಕ ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಬೀದರ