
ಕಲಬುರಗಿ:ಮಾ.16: ಈಗಾಗಲೇ ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಪರಿತವಾದ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಬೇಸಿಗೆ ದಿನಗಳಲ್ಲಿ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿ, ಉಷ್ಣಾಂಶದಲ್ಲಿ ಏರಿಕೆಯಾಗುವುದರಿಂದ ಅದರ ಪರಿಣಾಮವು ಮಾನವನ ದೇಹದ ಮೇಲೆ ನೇರವಾಗಿ ಬೀರುತ್ತದೆ. ಆದ್ದರಿಂದ ಆರೋಗ್ಯದಲ್ಲಿ ಏರು-ಪೇರುಗಳಾಗುವದರಿಂದ ಪ್ರತಿಯೊಬ್ಬರು ಮುನ್ನೆಚ್ಚರಿಕೆಗಳನ್ನು ವಹಿಸಿಕೊಂಡು, ಬಿಸಿಲಿನಿಂದ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ‘ಬೇಸಿಗೆ ಮುಂಜಾಗ್ರತಾ ಕ್ರಮಗಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬೇಸಿಗೆ ದಿವಸಗಳಲ್ಲಿ ಉಷ್ಣಾಂಶದ ಹೆಚ್ಚಾಗಿರುವದರಿಂದ ಬೆವರಿನ ಉತ್ಪಾದನೆಯ ಪ್ರಮಾಣ ಜಾಸ್ತಿಯಾಗಿರುತ್ತದೆ. ಆಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ದೇಹ ಬಿಸಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ 10 ಲೀಟರ್‍ನಷ್ಟು ನೀರನ್ನು ಕುಡಿಯಬೇಕು. ಬಿಸಲಿನಲ್ಲಿ ಸುತ್ತಾಡಬಾರದು. ಒಂದು ವೇಳೆ ಹೊರಗಡೆ ತಿರುಗಾಡುವ ಸಮಯದಲ್ಲಿ ತಲೆ, ಮೈ-ಕೈಯನ್ನು ಬಿಳಿ ವಸ್ತ್ರದಿಂದ ರಕ್ಷಿಸಬೇಕು ಎಂದರು.
ಬೇಸಿಗೆ ದಿವಸಗಳಲ್ಲಿ ಸಾಮಾನ್ಯವಾಗಿ ತಲೆನೋವು, ಆಮಶಂಕೆ, ಸುಸ್ತು, ಉಷ್ಣ ಗುಳ್ಳೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಆಗ ಅದರ ಬಗ್ಗೆ ನಿರ್ಲಕ್ಷ ವಹಿಸದೇ ಚಿಕಿತ್ಸೆ ಪಡೆಯಿರಿ. ಶುದ್ಧ, ಸ್ವಚ್ಚವಾದ ನೀರು, ಆಹಾರ ಸೇವಿಸಬೇಕು. ಎಣ್ಣೆಯಲ್ಲಿ ಕರಿದ-ಹುರಿದ, ಘನ ಆಹಾರ ಸೇವನೆ ಬೇಡ. ನಿಯಮಿತವಾಗ ವಿಶ್ರಾಂತಿ ಪಡೆಯಬೇಕು. ತಂಪು ಪಾನೀಯಗಳ ಬದಲಾಗಿ ಎಳೆ ನೀರು, ನಿಂಬೆ, ಮಜ್ಜಿಗೆ ಸೇರಿದಂತೆ ವಿವಿಧ ಹಣ್ಣಿನ ರಸ ಸ್ವೀಕರಿಸಬೇಕೆಂದು ಅನೇಕ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಶಿವಯೋಗಪ್ಪ ಬಿರಾದಾರ, ಪುಷ್ಪಾ ಆರ್.ರತ್ನಹೊನ್ನದ್, ಜಗನಾಥ ಗುತ್ತೇದಾರ, ಕಿರಣ ಪಾಟೀಲ ಸೇರಿದಂತೆ ಮತ್ತಿತರರಿದ್ದರು.