ಬೇಸಿಗೆಯ ಭತ್ತದ ಒಣ ಮೇವಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು”


ಸಿ.ಶಿವರಾಮ, ಸಿರಿಗೇರಿ
ಸಿರಿಗೇರಿ ಏ.20. ಏಪ್ರಿಲ್ ತಿಂಗಳು ವಿಧಾನಸಭಾ ಚುನಾವಣೆ ಖಾವು ಗ್ರಾಮೀಣ ಭಾಗದಲ್ಲಿ ರಂಗೇರಿದೆ, ರಾಜಕಾರಣಿಗಳು ಅವರ ಹಿಂಬಾಲಕರು, ಕಾರ್ಯಕರ್ತರು ನಾಮಿನೇಶನ್ ಮಾಡಿಸುವಲ್ಲಿ ಮುಳುಗಿದ್ದರೆ, ಇತ್ತ ಅನ್ನದಾತ ರೈತರು ತಮ್ಮ ಜಾನುವಾರುಗಳಿಗೆ ಮೇವು ಕಲೆಹಾಕಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಎಂಎಲ್‍ಎ ಗೆ ಸ್ಪರ್ಧಿಸಲು ಟಿಕೇಟ್ ಗಳಿಸುವುದು ರಾಜಕಾರಣಿಗೆಳಷ್ಟು ತಲೆ ಬಿಸಿಯೋ ಅಷ್ಟೇ ತಲೆಬಿಸಿಯಿಂದ ರೈತರು ಮೇವು ಸಂಗ್ರಹಕ್ಕೆ ತೊಡಗಿದ್ದಾರೆ. ಜಾನುವಾರುಗಳಿಗೆ ಸುಗ್ಗಿಯ ಮೇವಿಗಿಂತ ಬೇಸಿಗೆಯ ಮೇವು ಹೆಚ್ಚು ಆದ್ಯತೆ ಹೊಂದಿದ್ದು ಬೇಸಿಗೆ ಭತ್ತದ ಮೇವಿಗೆ ಇನ್ನಿಲ್ಲದ ಡಿಮ್ಯಾಂಡು ಬಂದಿದೆ.
ಟ್ರಾಕ್ಟರ್ ಮಾಲಿಕರಿಗೆ ದುಡಿಮೆ: ಇದೇ ಭರದಲ್ಲಿ ಕೆಲ ಟ್ರಾಕ್ಟರ್‍ಗಳ ಮಾಲೀಕರು ಮೇವು ಮಾರಾಟಕ್ಕೆ ಮುಂದಾಗಿ ಟ್ರಾಕ್ಟರ್‍ಗೆ ನಾಲ್ಕಾರು ಜನ ಕೂಲಿಯಾಳು ಇಟ್ಟುಕೊಂಡು, ಭತ್ತವನ್ನು ಕೊಯ್ಲು ಮಾಡುವ ಗದ್ದೆಗಳಿಗೆ ಎಡತಾಕುತ್ತಿದ್ದಾರೆ. ಬೆಳಗಿನಜಾವದಿಂದ ಒಣಮೇವು ಸಂಗ್ರಹಿಸಿ ಟ್ರಾಕ್ಟರ್‍ಗಳಿಗೆ ಹೇರಿಕೊಂಡು ಗ್ರಾಮಗಳಲ್ಲಿ ಸಂಚರಿಸಿ 5500/- ರೂ. ಗಳಿಂದ 6500/- ರೂ.ಗಳಿಗೆ ಒಂದು ಟ್ರಿಪ್‍ನಂತೆ ಮಾರಾಟ ಮಾಡುತ್ತಿದ್ದಾರೆ. ಗದ್ದೆ ಇರದ, ಜಾನುವಾರುಗಳನ್ನು ಸಾಕಿಕೊಂಡಿರುವ, ಹೈನುಗಾರಿಕೆ ಮಾಡುವ ರೈತರು ಗ್ರಾಮದಲ್ಲಿ ಬರುವ ಮೇವಿನ ಟ್ರಾಕ್ಟರ್‍ಗಳನ್ನು ನಿಲ್ಲಿಸಿ ಮೇವು ಖರೀದಿ ಮಾಡುತ್ತಿದ್ದಾರೆ.
ಮೇವಿನ ಖಣಜವಾದ ತುಂಗಾಭದ್ರ ತಟ: ಸಿರುಗುಪ್ಪ ತಾಲೂಕಿನಲ್ಲಿ ಭತ್ತದ ಖಣಜವೆಂದೇ ಖ್ಯಾತಿ ಹೊಂದಿರುವ ತುಂಗಾಭದ್ರ ನದಿ ತಟದ ಮಣ್ಣೂರು, ಸೂಗೂರು, ರುದ್ರಪಾದ, ನಡವಿ, ಉಡೆಗೋಳ, ನಿಟ್ಟೂರು ಇತರೆ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಬೇಸಿಗೆ ಭತ್ತದ ಕೊಯ್ಲು ನಡೆಯುತ್ತಿದ್ದು, ಭತ್ತದ ಗದ್ದೆಗಳಿಂದ ಎಥೇಚ್ಚವಾಗಿ ಒಣಮೇವು ಲಭ್ಯವಾಗುತ್ತಿದೆ. ಬಳ್ಳಾರಿ ಜಿಲ್ಲೆಯ ನಾನಾ ಗ್ರಾಮಗಳ ರೈತರು ಟ್ರಾಕ್ಟರ್‍ಗಳನ್ನು ತಂದು ಒಂದು ಎಕರೆಗೆ 300/- ರೂ. ನಿಂದ 500/- ರೂ. ಹಣ ನೀಡಿ ಮೇವು ಬಾಚಿಕೊಳ್ಳುತ್ತಿದ್ದಾರೆ.
ನಮ್ಮ ಕಡೆಗೆ ಭತ್ತ ನಾಟಿ ಕಡಿಮೆ ಆದ್ದರಿಂದ ನಮ್ಮ ಎತ್ತು, ಎಮ್ಮೆ, ಆಕಳುಗಳಿಗೆ ಮೇವು ಖರೀದಿಸಿಕೊಳ್ಳುತ್ತಿದ್ದೇವೆ. ಸುಗ್ಗಿಯ ಮೇವು ಮಳೆಬಂದು ಗುಣಮಟ್ಟ ಇರುವುದಿಲ್ಲ. ಬೇಸಿಗೆಯ ಮೇವು ಗುಣಮಟ್ಟದ್ದಾಗಿದ್ದು, ಬರುವ ಬೇಸಿಗೆಯವರೆಗೆ ಬಳಸಬಹುದು. ಅದರಲ್ಲೂ ಈ ನದಿಭಾಗದ ಮೇವು ದನಗಳಿಗೆ ತಿನ್ನಲು ಚನ್ನಾಗಿರುತ್ತದೆ.:- ಕುರುಗೋಡು ತಾಲೂಕಿನ ರೈತ