ಬೇಸಿಗೆಯೊಳಗೆ ನಗರದ ಜನತಗೆ 24×7 ಕುಡಿಯುವ ನೀರು

ಬಳ್ಳಾರಿ, ಡಿ.30: ಬೆಂಗಳೂರಿನ ವಿಕಾಸ ಸೌಧದಲ್ಲಿ ನಿನ್ನೆ ಬಳ್ಳಾರಿ ಮತ್ತು ಹೊಸಪೇಟೆ ನಗರಗಳಲ್ಲಿ ನಡೆಯುತ್ತಿರುವ 24×7 ನಿರಂತರ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಬಳ್ಳಾರಿ ನಗರದಲ್ಲಿ 24×7 ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಸಂಬಂಧಿಸಿದ ಗುತ್ತಿಗೆದಾರರು ಇದುವರೆಗೆ 12 ವಲಯಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದು, ಸದರಿ ವಲಯಗಳಲ್ಲಿ ಹೈಡ್ರಾಲಿಕ್ ಟೆಸ್ಟ ನಂತರ ಬರುವ ಜ. 31 ರೊಳಗೆ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ಉಳಿದ 8 ವಲಯಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪರಸ್ಪರ ಸಹಕಾರದೊಂದಿಗೆ ಸದರಿ ಕಾಮಗಾರಿ ಪೂರ್ಣಗೊಳಿಸಿ, ಬೇಸಿಗೆಯೊಳಗೆ ನಗರದ ಜನರಿಗೆ 24×7 ಕುಡಿಯುವ ನೀರು ಸರಬರಾಜು ಮಾಡಲು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸೂಚಿಸಿದ್ದಾರೆ.
ಬಳ್ಳಾರಿ ನಗರದಲ್ಲಿನ ಒಳಚರಂಡಿ ಮತ್ತು ಕುಡಿಯುವ ನೀರನ್ನು ಸಮರ್ಪಕ ಅನುಷ್ಠಾನಕ್ಕೆ ಅಗತ್ಯವಿರುವ ವಿಷಯವನ್ನು ಚರ್ಚಿಸುವಂತೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆಯನ್ನು ತುರ್ತಾಗಿ ಆಯೋಜಿಸಿ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ, ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲು ತಿಳಿಸಲಾಯಿತು.
ಸಭೆಯಲ್ಲಿ ನಗರ ಶಾಸಕ ಗಾಲಿ ‌ಸೋಮಶೇಖರ ರೆಡ್ಡಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮೊದಲಾದವರು ಇದ್ದರು