ಬೇಸಿಗೆಯಲ್ಲಿ ಬರುವ ಚೈತ್ರಗೌರಮ್ಮ

ಕಲಬುರಗಿ,ಏ 17:ಉತ್ತರ ಕರ್ನಾಟಕದ ಕಡೆಗೆ ಚೈತ್ರಮಾಸದ ತದಿಗೆಯಿಂದ ಚೈತ್ರ ಗೌರಿಯನ್ನು ಮನೆಯ ಮಾಡಿನಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಚೈತ್ರಮಾಸದ ತದಿಗೆಯಿಂದ ಒಂದು ತಿಂಗಳವರೆಗೆ, ಅಂದರೆ ಅಕ್ಷಯ ತೃತೀಯಾವರೆಗೆ ಚೈತ್ರ ಗೌರಿ ಇರುತ್ತಾಳೆ.ಈ ಗೌರಿ ಬಹಳ ಸರಳ ಶಾಂತಗೌರಿ. (ಬೇಸಿಗೆ ರಜೆಗೆ ತೌರಿಗೆ ಬರುವ ಮಗಳಂತೆ.)ಕೆಲವರು ಮನೆಯಲ್ಲಿ ಗಂಗಾ ಗಿಂಡಿಯ ಜೊತೆಗೆ ಚಿಕ್ಕ ಗಿಂಡಿಯ ಮೇಲೆ ಮಾವಿನಕಾಯಿ ಇಟ್ಟು ಅದಕ್ಕೆ ಅಲಂಕಾರ ಮಾಡಿ ಕೂಡಿಸುತ್ತಾರೆ.ಮುಂದೆ ವಿವಿಧ ಪಂಚ ಧಾನ್ಯಗಳ ಸಸಿ ಹಾಕುತ್ತಾರೆ. ಕೆಲವರ ಮನೆಯಲ್ಲಿ ತೊಟ್ಟಿಲಗೌರಿ,ಹೀಗೇ.
ಆಕೆಯ ಪೂಜೆಗೆ ಹೂವು ಹಣ್ಣು, ನೈವೇದ್ಯಕ್ಕೆ ಮಾವಿನಕಾಯಿ ಕೋಸಂಬರಿ ಪಾನಕ ಮುಖ್ಯ. ನೆನೆಸಿದ ಹೆಸರುಕಾಳು ಕಡಲೆಕಾಳು ಉಡಿತುಂಬಲು. ಸಾಯಂಕಾಲದಲ್ಲಿ ಅಕ್ಕ ಪಕ್ಕದ ಮನೆಯ ಹೆಣ್ಣುಮಕ್ಕಳನ್ನು ಅರಿಸಿನ ಕುಂಕುಮಕ್ಕೆ ಕರೆದು ಎಲೆಅಡಿಕೆ ಪಾನಕ ಕೊಡುವ ಸಂಪ್ರದಾಯ. ಇದನ್ನು ಹೂವೀಳ್ಯ ಅಂತ ಕರೆಯುವುದು. ಮೊದಲೆಲ್ಲ ಪ್ರತಿ ಶುಕ್ರವಾರ ಮಂಗಳವಾರ ಹೂವೀಳ್ಯ ಮಾಡುತ್ತಿದ್ದರು.ಈಗ ರಾಮ ನವಮಿ ,ಹನುಮಜಯಂತಿ ಮಧ್ಯದತದಿಗೆ ,ಅಕ್ಷಯತೃತೀಯಾಗಳಿಗೆ ಸೀಮಿತವಾಗಿದೆ. ಒಮ್ಮೆಯಾದರೂ ಹೂರಣಕಡುಬು ಮಾಡಿ ನೈವೇದ್ಯ ಮಾಡುತ್ತಾರೆ. ಕೆಲವರ ಮನೆಯಲ್ಲಿ ಚೈತ್ರಮಾಸದಲ್ಲಿ ಒಂದುದಿನ ದೊಡ್ಡ ಗೌರಿಯನ್ನು ಬಹಳ ಸೊಗಸಾಗಿ ಅಲಂಕರಿಸಿ ಕೂಡಿಸಿ ಪೂಜಿಸುತ್ತಾರೆ. ಒಂದು ಚಿಕ್ಕ ಮಗುವಿನಷ್ಟು ಎತ್ತರದ ಸುಂದರವಾದ ಗೌರಿ ವಿಗ್ರಹಕ್ಕೆ ಚಂದದ ಸೀರೆಯುಡಿಸಿ, ಆಭರಣಗಳಿಂದ ಅಲಂಕರಿಸಿ, ಸುಂದರವಾದ ಮಂಟಪದಲ್ಲಿ ಕೂಡಿಸಿ ವಿದ್ಯುತ್ ದೀಪಗಳಿಂದ ಶೃಂಗರಿಸಿ ನಾನಾ ತರದ ಭಕ್ಷ್ಯಗಳನ್ನು ನೈವೇದ್ಯಕ್ಕೆ ಇಡುತ್ತಾರೆ.ನಮ್ಮ ಹಬ್ಬಗಳ ವಿಶೇಷತೆಯೇ ಬಹಳ ಅರ್ಥಪೂರ್ಣ. ಆಯಾ ಕಾಲಕ್ಕೆ ತಕ್ಕಂತೆ ಊಟೋಪಚಾರ, ಆಚರಣೆಗಳು.
-ರತ್ನಾ. ಜೋಷಿ.