ಬೇಸಿಗೆಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ: ಮೇಯರ್ ವಿನಾಯಕ್ ಪೈಲ್ವಾನ್ ಸೂಚನೆ 

ದಾವಣಗೆರೆ.ಮಾ.೧೦: ನಗರದ ಟಿ. ಬಿ. ಸ್ಟೇಷನ್ ಹಾಗೂ ಕುಂದುವಾಡ ಕೆರೆಗೆ ಮೇಯರ್ ವಿನಾಯಕ್ ಪೈಲ್ವಾನ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ನೀರಿನ ಸಂಗ್ರಹ ಮತ್ತು ಸರಬರಾಜು ಆಗುತ್ತಿರುವ ಕುರಿತಂತೆ ಮೇಯರ್ ಮಾಹಿತಿ ಪಡೆದರು. ಬೇಸಿಗೆ ಬರುತ್ತಿದೆ. ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಈಗಿನಿಂದಲೇ ಈ ಬಗ್ಗೆ ಎಚ್ಚರ ವಹಿಸುವಂತೆ ಮೇಯರ್ ವಿನಾಯಕ್ ಪೈಲ್ವಾನ್  ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಉಪಮೇಯರ್ ಯಶೋಧಾ, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ. ಚಮನ್ ಸಾಬ್, ಮಾಜಿ ಮೇಯರ್ ಎಸ್. ಟಿ. ವೀರೇಶ್, ಕೆ. ಎಂ. ವೀರೇಶ್ ಅವರಿದ್ದ ತಂಡವು ಪಂಪ್ ಹೌಸ್ ಗೂ ಭೇಟಿ ನೀಡಿತು. ಕೆಟ್ಟು ಹೋಗಿದ್ದ ಮೋಟಾರ್ ಸರಿಪಡಿಸಲಾಗಿದ್ದು, ಇಲ್ಲಿಗೂ ಹೋಗಿ ಪರಿಶೀಲಿಸಲಾಯಿತು. ಮೋಟಾರ್ ಸರಿಪಡಿಸಿದ್ದು, ನೀರು ಸರಬರಾಜು ಆಗುತ್ತಿರುವುದನ್ನು ವೀಕ್ಷಿಸಲಾಯಿತು. ಮೇಯರ್ ವಿನಾಯಕ್ ಪೈಲ್ವಾನ್ ಮಾತನಾಡಿ, ಮೇಯರ್ ಆದ ಬಳಿಕ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದೇನೆ. ಕುಂದುವಾಡ ಕೆರೆ ಹಾಗೂ ಟಿ.ವಿ ಸ್ಟೇಷನ್ ನಲ್ಲಿ ನೀರು ಸಂಗ್ರಹವಾಗಿದೆ. ಏನೇ ಸಮಸ್ಯೆ ಇದ್ದರೂ ನೇರ ನನ್ನ ಗಮನಕ್ಕೆ ತನ್ನಿ. ಯಾವುದೇ ಕಾರಣಕ್ಕೂ ಬೇಸಿಗೆಯಲ್ಲಿ ಜನರಿಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಈಗಿನಿಂದಲೇ ತಯಾರಿ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಸಬೂಬು ಹೇಳಬೇಡಿ. ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಅಧಿಕಾರಿಗಳು ಆಗಾಗ್ಗೆ ಸ್ಥಳಕ್ಕೆ ಬಂದು ಪರಿಶೀಲಿಸಬೇಕು. ತೊಂದರೆ ಆದ ಕೂಡಲೇ ಗಮನಕ್ಕೆ ತಂದರೆ ಹೆಚ್ಚು ಸಮಸ್ಯೆಯಾಗದಂತೆ ನೋಡಿಕೊಳ್ಳಬಹುದು ಎಂದು ಹೇಳಿದರು. ಪಾಲಿಕೆಯ ಎಇಇಗಳಾದ ಸಂದೀಪ್, ಉದಯ್ ಕುಮಾರ್,  ಜಂಟಿ ಅಭಿಯಂತರ ಸಚಿನ್ ಸ್ಥಳದಲ್ಲಿ ಹಾಜರಿದ್ದರು. ಮೋಟಾರ್ ಹಾಳಾಗಿದ್ದರಿಂದ ಹತ್ತು ದಿನಗಳಿಗೊಮ್ಮೆ ನೀರು ಪೂರೈಸಲಾಗುತಿತ್ತು. ಆದ್ರೆ, ಈಗ ಮೋಟಾರ್ ಸರಿ ಹೋಗಿದ್ದು, ಆರರಿಂದ ಏಳು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಾಲ್ಕರಿಂದ ಐದು ದಿನಕ್ಕೆ ನೀರು ಪೂರೈಸಲಾಗುವುದು. ಹೊಂಡ ಸರ್ಕಲ್ ಬಳಿ ಪೈಪ್ ಲೈನ್ ದುರಸ್ತಿ ಮಾಡಲಾಗುತ್ತಿದ್ದು, ಈ ಕೆಲಸ ಮುಗಿದಾಕ್ಷಣ ನೀರು ಹರಿಸಲಾಗುತ್ತದೆ. ಹೊಸ ದಾವಣಗೆರೆಯಲ್ಲಿ ಮೂರರಿಂದ ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಯಾವುದೇ ತೊಂದರೆ ಇಲ್ಲ ಎಂದು ಉದಯ್ ಕುಮಾರ್ ಮಾಹಿತಿ ನೀಡಿದರು.ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದ್ದು, ಅದನ್ನು ಪಾಲಿಸುತ್ತೇವೆ. ಬೇಸಿಗೆ ವೇಳೆ ನೀರು ಸರಬರಾಜು ಮಾಡುವಷ್ಟು ಸಂಗ್ರಹ ಇದೆ. ತೊಂದರೆ ಏನಿಲ್ಲ. ಜಲಸಿರಿ ಯೋಜನೆಯಡಿ ಕೆಲವೆಡೆ ಕಾಮಗಾರಿ ನಡೆಯುತ್ತಿದೆ. ಹಾಗಾಗಿ, ಈ ಭಾಗಗಳಲ್ಲಿ ಸ್ವಲ್ಪ ತೊಂದರೆ ಆಗಬಹುದು. ಇಲ್ಲಿಯೂ ಹೆಚ್ಚು ಗಮನ ನೀಡಲಾಗಿದೆ. ಜನರಿಗೆ ತೊಂದರೆಯಾಗದಂತೆ ನೀರು ಪೂರೈಸಲಾಗುತ್ತಿದೆ ಎಂದು ಉದಯಕುಮಾರ್ ಮಾಹಿತಿ ನೀಡಿದರು.