ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ : ಶಾಸಕ ರಾಜು ಕಾಗೆ ಸೂಚನೆ

ಅಥಣಿ:ಫೆ.12: ಮಳೆಯ ಅಭಾವದಿಂದ ಈಗಾಗಲೇ ಅಥಣಿ ಹಾಗೂ ಕಾಗವಾಡ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡು ಬರುತ್ತಿದ್ದು, ಬರುವ ಜೂನ್ ತಿಂಗಳವರೆಗೆ ಜನ ಹಾಗೂ ಜಾನುವಾರುಗಳಿಗೆ ಎಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ತಾಲೂಕಾ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಸೂಚನೆ ನೀಡಿದರು.
ಅವರು ಪಟ್ಟಣದ ತಾಪಂ ಸಭಾಭವನದಲ್ಲಿ ಅಥಣಿ ಮತ್ತು ಕಾಗವಾಡ ತಾಲೂಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷ್ಣಾ ನದಿಯಲ್ಲಿ ನೀರು ಇರುವವರೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ವಿವಿಧ ಹಳ್ಳಿಗಳಿಗೆ ಸಕಾಲಕ್ಕೆ ಕುಡಿಯುವ ನೀರು ಒದಗಿಸಬೇಕು. ಈ ಯೋಜನೆಯ ನೀರಿನಿಂದ ವಂಚಿತವಾದ ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕಾ ಅಧಿಕಾರಿಗಳು ಈ ಬರಗಾಲ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನ ನಿಗಾವಹಿಸಿ ಕೆಲಸ ಮಾಡಬೇಕು.ಯಾವುದೇ ಗ್ರಾಮ, ಅಥವಾ ತೋಟದ ವಸತಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇರುವುದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಆ ಗ್ರಾಮದ ಜನಸಂಖ್ಯೆ ಹಾಗೂ ಗ್ರಾಮದಲ್ಲಿರುವ ದನ ಕರುಗಳ ಸಂಖ್ಯೆ ಮತ್ತು ಅದಕ್ಕೆ ತಕ್ಕಂತೆ ಅಲ್ಲಿ ದಿನಕ್ಕೆ ತಗಲುವ ಕುಡಿಯುವ ನೀರಿನ ಪ್ರಮಾಣದ ಬೇಡಿಕೆಯ ಮನವಿಯನ್ನು ಕೂಡಲೇ ತಹಶೀಲ್ದಾರರಿಗೆ ಸಲ್ಲಿಸಬೇಕು ಎಂದರು.
ಸಮಸ್ಯೆ ಇರುವ ಗ್ರಾಮದ ಸಮೀಪ ಎಲ್ಲಿಯಾದರೂ ನೀರಿನ ಸೌಲಭ್ಯವಿದೆಯೋ? ಹಾಗಾದರೆ ಎಲ್ಲಿಂದ ನೀರು ತರಲು ಸಾಧ್ಯವಿದೆ. ಇಲ್ಲದಿದ್ದರೆ ಪರ್ಯಾಯ ಏನು ಎಂಬುದನ್ನು ತಿಳಿಸಬೇಕು. ಒಂದು ವೇಳೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದಾದರೆ ಅವರಿಗೆ ನೀರು ಸಮೀಪ ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿಸಬೇಕು. ಅಲ್ಲದೇ?5 ಕಿ.ಮೀ.ಗಿಂತ ದೂರದಿಂದ ನೀರು ತರಬೇಕಾಗಿದ್ದರೆ ಅಂಥ ಗ್ರಾಮಗಳಲ್ಲಿನ ನೀರಿನ ಮೂಲಗಳ ಬಗ್ಗೆಯೂ ತಿಳಿಸಬೇಕು. ನೀರು ಪೂರೈಕೆಗೆ ತಗಲುವ ವೆಚ್ಚವನ್ನು ಕೂಡ ಮೇಲಾಧಿಕಾರಿಗಳಿಗೆ ತಿಳಿಸಬೇಕು ಎಂದು ಸೂಚಿಸಿದರು.
ವಿವಿಧ ಗ್ರಾಮ ಪಂಚಾಯಿತಿಗಳಿಂದ ಆಗಮಿಸಿದ್ದ ಪಿಡಿಒಗಳ ಮೂಲಕ ಮಾಹಿತಿ ಪಡೆದುಕೊಂಡ ಶಾಸಕರು ಸರ್ಕಾರ ನಿಗದಿಪಡಿಸಿದ ದರದಲ್ಲಿ ನೀರು ಪೂರೈಸುವ ಟ್ಯಾಂಕರ್ ಗಳು ಮಾಲೀಕರಿಂದ ಒಪ್ಪಿಗೆ ಪತ್ರ ಪಡೆದುಕೊಂಡು ಕೂಡಲೇ ಅವಶ್ಯಕತೆ ಇರುವ ವಸತಿಗಳ ಜನ ಮತ್ತು ಜಾನುವಾರುಗಳಿಗೆ ನೀರು ಒದಗಿಸಬೇಕು ಎಂದು ಸೂಚಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಪೂರೈಸಲಾಗುವ ಕುಡಿಯುವ ನೀರು ಕೆಲವು ಗ್ರಾಮಗಳಲ್ಲಿ ಮೂರು ದಿನಕ್ಕೊಮ್ಮೆ ಬಂದರೆ ಇನ್ನೂ ಕೆಲವು ಗ್ರಾಮಗಳಲ್ಲಿ ವಾರಕ್ಕೊಮ್ಮೆ, ಹತ್ತು ದಿನಗಳ ನಂತರ ನೀರು ಪೂರೈಕೆಯಾಗುತ್ತಿದೆ. ಇನ್ನು ಕೆಲವು ಹಳ್ಳಿಗಳಲ್ಲಿ ಅಳವಡಿಸಲಾಗಿರುವ ಶುದ್ಧ ನೀರಿನ ಘಟಕಗಳು ಕೆಲವು ರಿಪೇರಿ ಹಂತದಲ್ಲಿವೆ. ಇನ್ನು ಕೆಲವು ನೀರಿನ ಅಭಾವದಿಂದ ಸ್ಥಗಿತಗೊಂಡಿವೆ. ಅವುಗಳನ್ನು ಕೂಡ ಕೂಡಲೇ ರಿಪೇರಿ ಮಾಡಿಸಬೇಕು. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಅವುಗಳಿಗೆ ಕೂಡಲೇ ನೀರಿನ ಮೂಲದ ಸೌಲಭ್ಯ ಒದಗಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಅನೇಕ ಗ್ರಾಮಗಳಲ್ಲಿ ನೀರಿನ ಅಭಾವವಿದ್ದು, ನೆರೆಯ ಮಹಾರಾಷ್ಟ್ರದ ಕೆಲವು ಗ್ರಾಮಗಳಿಂದ ನೀರು ತರುವುದು ಅನಿವಾರ್ಯ. ಅಲ್ಲಿಂದ ನೀರು ತಂದು ಗ್ರಾಮಗಳ ಜನತೆಗೆ ಒದಗಿಸಬೇಕಾದರೆ ಅಲ್ಲಿನ ಕೆಲವು ರೈತರು ಉಚಿತವಾಗಿ ನೀರು ಕೊಡುವುದಿಲ್ಲ, ಅದಕ್ಕಾಗಿ ಹೆಚ್ಚಿನ ಖರ್ಚಾಗುತ್ತದೆ. ನೀರು ಪೂರೈಕೆಯಲ್ಲಿ ವಿಳಂಬವಾದರೆ ಕೆಲವು ವಸತಿಯ ಜನರು ಗ್ರಾಮ ಪಂಚಾಯಿತಿಗಳಿಗೆ ಬಂದು ಕೀಲಿ ಜಡಿದು ಪ್ರತಿಭಟಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ಅಳಲು ತೋಡಿಕೊಂಡರು.
ಈ ವೇಳೆ ಕುಡಿಯುವ ನೀರು ಮತ್ತು ನೈರ್ಮಲ್ ಇಲಾಖೆಯ ಸಹಾಯಕ ಅಭಿಯಂತರ್ ರವೀಂದ್ರ ಮುರಗಾಲಿ ಮಾತನಾಡಿ ಬಹುಗ್ರಾಮ ಕುಡಿಯುವ ಯೋಜನೆಗೆ ಸಂಬಂಧಿಸಿದಂತೆ ಕಳೆದ 15 ವರ್ಷಗಳ ಹಿಂದೆ ಅಳವಡಿಸಲಾಗಿರುವ ಪಂಪ್ ಸೆಟ್ ಮತ್ತು ಪೈಪ್ ಲೈನ್ ಮೇಲಿಂದ ಮೇಲೆ ಹಾಳಾಗುತ್ತಿವೆ. ಈಗಿರುವ ವ್ಯವಸ್ಥಯಲ್ಲಿ ರಿಪೇರಿ ಮಾಡಿ ಪ್ರತಿ ಗ್ರಾಮಗಳಿಗೆ 2 ರಿಂದ 3 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಜೆಜೆಎಮ್ ಕಾಮಗಾರಿ ಯೋಜನೆ ಕೆಲವು ಗ್ರಾಮಗಳಲ್ಲಿ ಪ್ರಗತಿ ಹಂತದಲ್ಲಿದ್ದು ಇನ್ನೂ ಕೆಲವು ಗ್ರಾಮಗಳಲ್ಲಿ ಮುಕ್ತಾಯದ ಹಂತದಲ್ಲಿವೆ. ಅವುಗಳಿಗೆ ನೀರಿನ ಮೂಲ ಒದಗಿಸುವ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸುತ್ತೇವೆ. ಕೃಷ್ಣಾ ನದಿಯಲ್ಲಿ ನೀರು ಸಂಗ್ರಹ ಇರುವವರಿಗೆ ಈ ಯೋಜನೆಗಳ ಮೂಲಕ ನೀರು ಒದಗಿಸುತ್ತೇವೆ ಎಂದು ಹೇಳಿದರು.
ದನ ಕರುಗಳಿಗೆ ಮೇವಿನ ತೊಂದರೆ ಆಗದಂತೆ ಹಸಿಮೆವು ಮತ್ತು ಒಣ ಮೇವು ಖರೀದಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರು ಅಥಣಿ ಮತ್ತು ರಾಯಬಾಗ ತಾಲೂಕುಗಳಿಂದ ಹಸಿಮೆವು ಪೂರೈಸುವುದಾಗಿ ಮತ್ತು ವಿಜಯಪುರ ಜಿಲ್ಲೆಯಿಂದ ಒಣ ಮೆವು ಒದಗಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪಶು ಸಂಗೋಪನ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ನೀರು ಪೂರೈಕೆ ಮಾಡದೇ ಟ್ರಿಪ್‍ಗಳ ಬಗ್ಗೆ ಲೆಕ್ಕ ತೋರಿಸಿದರೆ ಅಂಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಎಲ್ಲಿಯೂ ಅವ್ಯವಹಾರ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಟ್ಯಾಂಕರ್‍ಗಳಿಂದ ನೀರು ಪೂರೈಕೆ ಮಾಡಿದ ಮಾಲೀಕರಿಗೆ ವಿಳಂಬ ಮಾಡದೆ ಕೂಡಲೇ ಬಿಲ್ ಪಾವತಿಸಲು ತಹಶೀಲ್ದಾರರಿಗೆ ಸೂಚಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು ಹಾಗೂ ನೋಡಲ್ ಅಧಿಕಾರಿ ರವಿ ಬಂಗಾರಪ್ಪನವರ ಮಾತನಾಡಿ ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಇರುವುದರಿಂದ ಶೀಘ್ರದಲ್ಲಿಯೇ ಎಲ್ಲರಿಗೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಲಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ನೀರಿನ ಮೂಲಗಳನ್ನು ಗುರುತಿಸಿ ಅವರಿಂದ ಒಪ್ಪಿಗೆ ಪತ್ರಗಳನ್ನು ಪಡೆದುಕೊಳ್ಳಬೇಕೆಂದು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಕುಡಿಯುವ ನೀರಿನ ಮೂಲಗಳು ಸರ್ವೆ ಮತ್ತು ಸಿದ್ಧತೆ ಕುರಿತು ಮಾಹಿತಿ ನೀಡಿದರು. ತಹಸಿಲ್ದಾರ್ ವಾಣಿ ಯು ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಬರಗಾಲ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಹಿಂದೆ ನಡೆದ ಅಧಿಕಾರಿಗಳ ಸಭೆ ಮತ್ತು ಮಾಹಿತಿಯ ಬಗ್ಗೆ ವಿವರಣೆ ನೀಡಿದರು. ಈ ವೇಳೆ ಅಭಿಯಂತರು ವೀರಣ್ಣ ವಾಲಿ, ಶ್ರೀಕಾಂತ ಮಾಕಾಣಿ, ರವೀಂದ್ರ ಮುರಗಾಲಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಯ ಪಿಡಿಓಗಳು , ಕಂದಾಯ ಇಲಾಖೆಯ ಅಧಿಕಾರಿಗಳು, ಕೃಷಿ ಮತ್ತು ಪಶುಸಂಗೋಪನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.