ಬೇಸಿಗೆಯಲ್ಲಿ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಿ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ,26- ನರೇಗಾ ಕೂಲಿ ಕಾರ್ಮಿಕರು ಆರೋಗ್ಯ ಬಗ್ಗೆ ಬಹಳ ಕಾಳಜಿ ವಹಿಸಬೇಕು. ಅದರಲ್ಲೂ ಬೇಸಿಗೆ ಸಂದರ್ಭದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್ ಹೇಳಿದರು.
ತಾಲೂಕಿನ ಅಡವಿಹಳ್ಳಿ ಗ್ರಾಪಂ ವ್ಯಾಪ್ತಿಯ ನಿಚ್ಚಾಪುರ ಗ್ರಾಮದ ಕೆರೆ ಅಂಗಳದಲ್ಲಿ ನರೇಗಾದಡಿ ಕೈಗೊಂಡಿದ್ದ ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನದಡಿ ಮಂಗಳವಾರ ಆಯೋಜಿಸಿದ್ದ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರ’ದಲ್ಲಿ ಮಾತನಾಡಿದರು.
ನಮ್ಮ ಭಾಗದಲ್ಲಿ ಹೆಚ್ಚು ಬಿಸಿಲಿನ ತಾಪಮಾನ ಇರುವುದರಿಂದ ಆರೋಗ್ಯ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಇರುತ್ತದೆ. ಅದರಲ್ಲೂ ಶ್ರಮ ಜೀವಿಗಳಾದ ನರೇಗಾ ಕೂಲಿಕಾರರಿಗೆ ಇದರ ನೇರ ಪರಿಣಾಮ ಖಂಡಿತ. ಆದರೆ, ಆತಂಕ ಬೀಳುವ ಅವಶ್ಯಕತೆ ಇಲ್ಲ. ಹೆಚ್ಚೆಚ್ಚು ನೀರು ಕುಡಿಯಬೇಕು. ದಣಿವಾದರೆ ಕೆಲ ಕಾಲ ಕೂಡಬೇಕು. ನಂತರ ಕೆಲಸ ಮಾಡಬಹುದು. ಯುವಕರ ಜತೆ ಸ್ಪರ್ಧೆಗೆ ಬಿದ್ದು ಹಿರಿಯ ನಾಗರಿಕರು ಕೆಲಸ ಮಾಡುವುದು ಬೇಡ. ಇರುವ ನಾಲ್ಕು ತಾಸಿನಲ್ಲಿ ಕೊಟ್ಟ ಅಳತೆಯಲ್ಲಿ ಕೆಲಸ ಮಾಡಬಹುದು. ಇನ್ನು ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನದಡಿ ಕೈಗೊಂಡಿರುವ ಈ ಶಿಬಿರದ ಲಾಭವನ್ನು ಎಲ್ಲರೂ ಪಡೆಯಬೇಕು. ಪ್ರತಿಯೊಬ್ಬರ ಆರೋಗ್ಯ ಕಾಳಜಿಯೂ ನಮಗೆ ಮುಖ್ಯವಾಗಿದೆ ಎಂದರು.
ತಾಲೂಕು ನರೇಗಾ ಸಹಾಯಕ ನಿರ್ದೇಶಕ ಚಂದ್ರನಾಯ್ಕ ಎಲ್. ಮಾತನಾಡಿ, ಏಪ್ರಿಲ್ ಶುರುವಾಗಿ ಮೂರು ವಾರವೇ ಕಳೆದಿದೆ. ತಾಲೂಕಿನ ಎಲ್ಲ ಕಡೆ ಕೆಲಸವೂ ನೀಡಲಾಗಿದೆ. ಇನ್ನು ಹೆಚ್ಚಿನದಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಬೇಕು. ಎಲ್ಲರೂ ಯೋಜನೆಯ ಲಾಭ ಪಡೆಯಬೇಕು. ಈ ದೃಷಿಯಿಂದ ಕೆಲಸದಲ್ಲಿಯೂ ಹಲವು ವರ್ಗಗಳಿಗೆ ರಿಯಾಯಿತಿ ನೀಡಲಾಗಿದೆ. ಈಗಾಗಲೇ ವಿಶೇಷ ವರ್ಗಗಳಾದ ಹಿರಿಯ ನಾಗರಿಕರು, ವಿಶೇಷ ಚೇತನರು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಶೇ.50 ರಿಯಾಯತಿ ಇದೆ. ಇದರ ಜತೆಗೆ ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಬಿಸಿಲು ಇರುವುದರಿಂದ ವಿಶೇಷ ವರ್ಗಗಳನ್ನು ಹೊರತುಪಡಿಸಿ ಸಾಮಾನ್ಯ ಕೂಲಿ ಕಾರ್ಮಿಕರಿಗೆ ಏಪ್ರಿಲ್, ಮೇ ನಲ್ಲಿ ಶೇ.30 % , ಜೂನ್ ನಲ್ಲಿ ಶೇ.20% ರಿಯಾಯತಿ ನೀಡಲಾಗಿದೆ ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಇದರ ಜತೆಗೆ ಆರೋಗ್ಯ ಕಡೆಗೂ ಗಮನಹರಿಸಿ ಎಂದು ತಿಳಿಸಿದರು.
ಕಾಮಗಾರಿ ಸ್ಥಳದಲ್ಲಿದ್ದ 100 ಕಾರ್ಮಿಕರ ಪೈಕಿ 70 ಜನರಿಗೆ ಲ್ಯಾಬ್ ಟೆಕ್ನಿಷಿಯನ್ ಗುರುಪ್ರಸಾದ್, ಸಮುದಾಯ ಆರೋಗ್ಯ ಅಧಿಕಾರಿ ರೂಪ ಎಸ್ ಅವರು ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದರು. ಇದೇ ವೇಳೆ ಮತದಾನ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪಿಡಿಒ ರಮೇಶ್, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಕೆ.ಎಚ್.ಪಿ.ಟಿ.ಯ ತಾಲೂಕು ಸಂಯೋಜಕ ಸಿ.ಕಾರ್ತಿಕ್, ತಾಂತ್ರಿಕ ಸಹಾಯಕ ಇಂಜಿಯನಿಯರ್ ಯೋಗೀಶ್, ಬಿಎಫ್‍ಟಿ ಭರಮಪ್ಪ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.