ಬೇಸಿಗೆಗೆ ಬಸವಳಿದ ದೇವದುರ್ಗದ ಮಂದಿ

ಕೃಷ್ಣಾ ನದಿ, ಬಲದಂಡೆ ನಾಲೆಯಲ್ಲಿ ಈಜಾಟ | ಹೆಚ್ಚುತ್ತಿದೆ ಬಿಸಿಲು, ಒಣಗುತ್ತಿದೆ ಒಡಲು
ಬಾಬುಅಲಿ ಕರಿಗುಡ್ಡ
ದೇವದುರ್ಗ,ಮೇ.೨೩-
ವಿಧಾನಸಭೆ ಚುನಾವಣೆ ಕಾವು ಕಡಿಮೆಯಾದರೂ ಸೂರ್ಯನ ಶಾಖ ಕಡಿಮೆಯಾಗಿಲ್ಲ. ದಿನೇದಿನೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು ಜನರನ್ನು ಹೈರಾಣ ಮಾಡಿದೆ. ಬೇಸಿಗೆ ಸೆಕೆ ತಣಿಸಲು ಜನರು ನಾನಾ ಕಸರತ್ತು ನಡೆಸಿದ್ದಾರೆ.
ತಾಲೂಕು ನೀರಾವರಿ ಪ್ರದೇಶಕ್ಕೆ ಒಳಪಟ್ಟಿದ್ದರೂ ಬೇಸಿಗೆ ಬಿಸಿಲು ಜನರನ್ನು ಹೈರಾಣ ಮಾಡಿದೆ. ತಣ್ಣನೆಯ ನೆಮ್ಮದಿಗಾಗಿ ಯುವಕರು ನದಿ, ಬಾವಿ, ಕೆರೆ, ಕಾಲುವೆಯಲ್ಲಿ ಈಜಾಡಿದರೆ, ಕೆಲವರು ತಂಪು ಪಾನೀಯ ಮೊರೆ ಹೋಗಿದ್ದಾರೆ. ಹಿರಿಯರು ಮರದ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಜಾನುವಾರುಗಳು ಜೀವಜಲಕ್ಕಾಗಿ ಹಳ್ಳಿಕೊಳ್ಳ, ನದಿ, ಕೆರೆಗಳಿಗೆ ಅಲೆಯುತ್ತಿವೆ.
ಮಾರ್ಚ್‌ನಿಂದ ಬಿಸಿಲು ಏರಿಕೆಯಾಗಿ, ಮೇನಲ್ಲಿ ಪ್ರಖರತೆ ಹೆಚ್ಚಾಗಿದೆ. ತಾಲೂಕಿನಲ್ಲಿ ನಿತ್ಯ ೩೬-೩೮ಸೆಲ್ಸಿಯಸ್ ಡಿಗ್ರಿ ಬಿಸಿಲು ಬೀಳುತ್ತಿದ್ದು, ಜನ ಜಾನುವಾರುಗಳನ್ನು ಸುಸ್ತಾಗಿವೆ. ಪಕ್ಷಿಗಳು ಕೂಡ ದಾಹ ನೀಗಿಸಲು ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಸಂಘ, ಸಂಸ್ಥೆಗಳು, ಸ್ವಯಂ ಸೇವಕರು ನೀರಿನ ಅರವಟಿಗೆ ತೆರೆದರೆ ಕೆಲವರು ಪ್ರಾಣಿ, ಪಕ್ಷಿಗಳಿಗೆ ಮನೆಮುಂದೆ ನೀರುಣಿಸುತ್ತಿದ್ದಾರೆ.
ಕುಡಿವ ನೀರಿಗಾಗಿ ತಾಲೂಕು ಬಹುತೇಕ ಕೃಷ್ಣಾ ನದಿ ಹಾಗೂ ನಾರಾಯಣಪುರ ಬಲದಂಡೆ ನಾಲೆ ಅವಲಂಬಿಸಿದೆ. ಬೇಸಿಗೆಯಲ್ಲೂ ಕೃಷ್ಣಾ ನದಿ ಸುಮಾರು ೫೭ಕಿಮೀ ಝರಿಯಂತೆ ಹರಿಯುತ್ತಿದೆ. ಯುವಕರು ಕೃಷ್ಣಾ ನದಿ, ಕಾಲುವೆಯಲ್ಲಿ ಮಿಂದೆದ್ದು ದೇಹ ತಂಪು ಮಾಡಿಕೊಳ್ಳುತ್ತಿದ್ದಾರೆ. ತಿಂಥಣಿ ಬ್ರಿಡ್ಜ್, ವೀರಗೋಟ, ಲಿಂಗದಹಳ್ಳಿ, ಹೂವಿನಹೆಡಗಿ, ಕೊಪ್ಪರ, ಗೂಗಲ್ ಸೇರಿ ವಿವಿಧೆಡೆ ನದಿಗೆ ತೆರಳಿ ಈಜಾಡುತ್ತಿದ್ದಾರೆ.
ಕೆಲವರು ಸಮೀಪದ ಕಾಲುವೆಯಲ್ಲಿ ಈಜಾಡಿದರೆ ಚಿಕ್ಕಹೊನ್ನಕುಣಿ, ಕಕ್ಕಲದೊಡ್ಡಿ, ಮುಷ್ಟೂರು, ಗಬ್ಬೂರು, ಗಲಗ ಸೇರಿ ವಿವಿಧೆಡೆ ಪುರಾತನ ಬಾವಿಗಳಲ್ಲಿ ಯುವಕರು ಈಜಾಡುತ್ತಿದ್ದಾರೆ. ಪಟ್ಟಣದ ವಿವಿಧೆಡೆ ತಂಪುಪಾನೀಯ ಅಂಗಡಿ ಆರಂಭವಾಗಿದ್ದರೆ, ಕಲ್ಲಂಗಡಿ, ಕರಬುಜ ಲಗ್ಗೆ ಹಾಕಿವೆ. ಮಣ್ಣಿನ ಮಡಿಕೆಗಳಿಗೂ ಬೇಡಿಕೆ ಬಂದಿದೆ.
ಹಿರಿಯರು ವಿವಿಧ ದೇವಸ್ಥಾನದ ಆವರಣದಲ್ಲಿರುವ ಮರದ ನೆರಳಿನಲ್ಲಿ ಆಶ್ರಯ ಪಡೆದು ನಿದ್ರಿಸುತ್ತಿದ್ದಾರೆ. ಇಲ್ಲಿನ ಸಾರ್ವಜನಿಕ ಗ್ರಂಥಾಲಯ, ಆಸ್ಪತ್ರೆ ಆವರಣ, ಅಂಬಾಭವಾನಿ ದೇವಸ್ಥಾನ, ಗೂಗಲ್ ಸೇರಿ ವಿವಿಧೆಡೆ ಇರುವ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದವಾರ ಮಳೆಬಿದ್ದಿದ್ದರಿಂದ ಗಾಳಿ ಕಡಿಮೆ ವಾತಾವರಣ ಕಾದಕಬ್ಬಣದಂತಾಗಿ ಬಿಸಿಲಿನ ಹೊಡತಕ್ಕೆ ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಬಾಕ್ಸ್===
ಆರೋಗ್ಯದ ಬಗ್ಗೆ ಇರಲಿ ಎಚ್ಚರ
ಬೇಸಿಗೆ ಉಷ್ಣತೆ ಹೆಚ್ಚುತ್ತಿರುವ ಕಾರಣ ಜನರು ಆರೋಗ್ಯದ ಜತೆ ಕಾಳಜಿವಹಿಸಲು ವೈದ್ಯರು ಸೂಚಿಸುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರಲ್ಲಿ ಸಮಸ್ಯೆಯಾಗಲಿದೆ. ತಲೆನೋವು, ಪುಟ್ಟ ಮಕ್ಕಳಲ್ಲಿ ವಾಂತಿ ಬೇಧಿ, ಜ್ವರ, ಮೈಕೈನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರ ನಿರ್ವಹಣೆಗೆ ಹೆಚ್ಚಾಗಿ ನೀರು ಸೇವಿಸುವ ಜತೆಗೆ ತಂಪುಪಾನಿಯ, ಸರಳ ಆಹಾರ ಸೇವಿಸಬೇಕು ಎನ್ನುವುದು ವೈದ್ಯರ ಸಲಹೆಯಾಗಿದೆ.

ಕೋಟ್=====
ಬಿಸಿಲಿನ ಪ್ರಖರತೆ ಹೆಚ್ಚಾದಂತೆ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆ ಬರುವುದು ಸಹಜ. ಆತಂಕಪಡುವ ಅಗತ್ಯವಿಲ್ಲ. ನೀರಿನ ಅಂಶ ಹೆಚ್ಚಿರುವ ಹಾಗೂ ಹಣ್ಣಿನ ಪದಾರ್ಥ ಹೆಚ್ಚಾಗಿ ಸೇವಿಸಬೇಕು. ಆಗಾಗ ನೀರು ಕುಡಿಯಬೇಕು. ಇಲ್ಲದಿದ್ದರೆ ಸನ್ ಸ್ಟ್ರೋಕ್, ನಿಶಕ್ತಿಯಾಗುವ ಸಾಧ್ಯತೆಯಿದೆ.

-ಡಾ.ಬನದೇಶ್ವರ
ತಾಲೂಕು ಆರೋಗ್ಯ ವೈದ್ಯಾಧಿಕಾರಿ