ಬೇವಿನ ಮರಗಳಿಗೆ ಡೈಬಾಕ್ ಫಂಗಸ್ ರೋಗ: ನಿಯಂತ್ರಣಕ್ಕೆ ಒತ್ತಾಯ

ಗಂಗಾವತಿ ನ.19: ಸರ್ವ ಶ್ರೇಷ್ಠ, ಸರ್ವೋಪಕಾರಿ ಬೇವಿನ ಮರಗಳಿಗೆ ಡೈಬಾಕ್ ಫಂಗಸ್ ರೋಗ ಹರಡುತ್ತಿದ್ದು, ಪರಿಸರ ಪೇಮಿಗಳಿಗೆ ನೋವುಂಟಾಗಿದೆ. ದೇಶದಾದ್ಯಂತ ಮನುಷ್ಯರಿಗೆ ಕೊರೋನ ರೋಗ ಬಂದಂತೆ ಬೇವಿನ ಮರಗಳಿಗೆ ಮಾತ್ರ ಮಾರಣಾಂತಿಕ ಡೈಬಾಕ್ ರೋಗ ಹಬ್ಬುತ್ತಿದೆ. ಇತ್ತೀಚಿಗೆ ಹಚ್ಚಿದ ಬೆಳೆದು ನಿಂತ ಗಿಡಗಳು ಒಣಗಿ ಹೋಗಿವೆ. ಈ ಬಗ್ಗೆ ಮಾಹಿತಿ ಪಡೆಯಲು ಕೃಷಿ ವಿಜ್ಞಾನಿಗಳನ್ನು ಕೇಳಿದಾಗ ವಿಸ್ತರಣಾ ಮುಂದಾಳು ಹಾಗೂ ಸಸ್ಯ ರೋಗ ತಜ್ಞರಾದ ಡಾ.ಎಂ.ಬಿ. ಪಾಟೀಲ್ ಹಾಗೂ ಡಾ.ಬದರಿ ಪ್ರಸಾದ್ ಗಂಗಾವತಿಗೆ ಬಂದು ರೋಗ ಲಕ್ಷಣಗಳು ಹಾಗೂ ತಡೆಗಟ್ಟುವ ವಿಧಾನ ತಿಳಿಸಿದ್ದಾರೆ. ಪ್ರಾರಂಭದಲ್ಲಿ ಒಂದೆರಡು ಎಲೆಗಳು ಒಣಗಿದರೆ ಆ ಭಾಗವನ್ನು ಕತ್ತರಿಸಿ ಗಿಡಕ್ಕೆ ಕಾಪರ್ ಆಕ್ಸಕ್ಲೋರೈಡ್‍ನ್ನು 3 ಗ್ರಾಂ ಪ್ರತಿ ಲಿಟರ್ ನೀರಿಗೆ ಸೇರಿಸಿ ಸಿಂಪಡಿಸಿದರೆ ಹಾಗೂ ಕತ್ತರಿಸಿದ ಟೊಂಗೆಗೆ ಕೇಂಪು ಮಣ್ಣನ್ನು ಮೆತ್ತುವುದರಿಂದ ರೋಗ ತಡೆಗಟ್ಟಬಹುದು ಎಂದು ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಜನರಿಗೆ ತಿಳುವಳಿಕೆ ಹಾಗೂ ಸರಕಾರದಿಂದ ತುರ್ತು ರೋಗ ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕೆಂದು ಗಂಗಾವತಿ ಚಾರಣ ಬಳಗದ ಸಂಚಾಲಕ ಡಾ. ಶಿವಕುಮಾರ್ ಮಾಲಿಪಾಟೀಲ್ ಒತ್ತಾಯಿಸಿದ್ದಾರೆ.