ಬೇರೆ ಕ್ಷೇತ್ರದಿಂದ ಸ್ಪರ್ಧೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ

ಬೆಂಗಳೂರು, ಜು. ೧೮- ಬಿಜೆಪಿಯಲ್ಲಿ ಅತಿ ಹೆಚ್ಚು ಬಾರಿ ಗೆದ್ದ ನಾಯಕರು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಎರಡು ದಿನಗಳ ಹಿಂದೆ ಬಿಜೆಪಿ ನಾಯಕರುಗಳು ಈ ಎಲ್ಲ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ. ಅತಿ ಹೆಚ್ಚು ಬಾರಿ ಗೆದ್ದ ನಾಯಕರುಗಳು ಬೇರೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಕೇಂದ್ರ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಆ ತೀರ್ಮಾನಕ್ಕೆ ನಮ್ಮ ಒಪ್ಪಿಗೆ ಇದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಟೇಕ್ ಆಫ್ ಆಗದೇ ಇರುವುದಕ್ಕೆ ಪ್ರಧಾನಿ ಮೋದಿಯವರನ್ನು ರಾಜ್ಯಕ್ಕೆ ಕರೆಸಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿಕಾರಿದ ಅವರು, ರಾಹುಲ್ ಮತ್ತು ಸೋನಿಯಾಗಾಂಧಿಯವರನ್ನು ಕರೆಸುತ್ತಿದ್ದೀರಲ್ಲ, ಇದು ಏನು. ಕಾಂಗ್ರೆಸ್ ಬದುಕಿಗೆ ಎಂದು ತೋರಿಸೋಕಾ ಎಂದು ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮೋದಿಯವರ ಬಗ್ಗೆ ಮಾತನಾಡಿಲ್ಲ ಎಂದರೆ ತಿಂದಿರುವ ಅನ್ನ ಜೀರ್ಣ ಆಗಲ್ಲ ಎಂದು ಕಿಡಿಕಾರಿದರು.
ಬೇರೆಯವರ ಬಗ್ಗೆ ಟೀಕೆ ಮಾಡುವ ಮೊದಲು ಅದು ನಮಗೆ ತಿರುಗು ಬಾಣ ಆಗುತ್ತದೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಈಶ್ವರಪ್ಪ ಹೇಳಿದರು.
ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವಕ್ಕೆ ಆಹ್ವಾನ ಬಂದರೆ ಹೋಗುತ್ತೀರಾ ಎಂಬ ಪ್ರಶ್ನೆಗೆ ನನಗೇನು ಗ್ರಹಚಾರನಾ ಹೋಗಲಿಕ್ಕೆ ಎಂದು ಅವರು ಸಿಟ್ಟಿನಿಂದ ಪ್ರತಿಕ್ರಿಯಿಸಿದರು.
ಒಕ್ಕಲಿಗ ಸಮುದಾಯಕ್ಕೆ ಸಿಎಂ ಆಗುವ ಕಾಲ ಬಂದಿದೆ ಎಂಬ ಡಿಕೆಶಿ ಹೇಳಿಕೆಗೂ ತಿರುಗೇಟು ನೀಡಿದ ಈಶ್ವರಪ್ಪ, ಒಕ್ಕಲಿಗ ಸಮುದಾಯದಲ್ಲಿ ಹಲವು ನಾಯಕರಿದ್ದಾರೆ. ಅವರಿಗೆ ಸಿಎಂ ಸ್ಥಾನವನ್ನು ಡಿಕೆಶಿ ಬಿಟ್ಟು ಕೊಡುತ್ತಾರಾ ಎಂದು ಪ್ರಶ್ನಿಸಿದರು.