ಬೇನಾಳ ಆರ್.ಎಸ್.ಗ್ರಾಮದಲ್ಲಿ ರಕ್ತದಾನ ಶಿಬಿರ

ಆಲಮಟ್ಟಿ:ಜೂ.10: ರಕ್ತದಾನ ಎಲ್ಲ ದಾನಗಳಲ್ಲೇ ಸರ್ವೋಚ್ಚ ಶ್ರೇಷ್ಠ ದಾನ. ರೋಗಿಯ ಪಾಲಿಗೆ ಅದು ಸಂಜೀವಿನಿವಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಸಿ ಮುತ್ತಲದಿನ್ನಿ ಅಭಿಪ್ರಾಯಿಸಿದರು.

ಸಮೀಪದ ಬೇನಾಳ ಆರ್.ಎಸ್.ಗ್ರಾಮದ ಗ್ರಾಮ ಪಂಚಾಯ್ತಿ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ವೈದ್ಯಕೀಯ ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಇಂದಿಗೂ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ, ದಾನಿಗಳಿಂದ ಸಂಗ್ರಹಿಸಿದ ರಕ್ತವೇ, ತುರ್ತು ಸಂದರ್ಭದಲ್ಲಿ ರೋಗಿಯ ಪಾಲಿಗೆ ಅಮೃತದಂತೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

ಆಲಮಟ್ಟಿ ಎಂ.ಎಚ್.ಎಂ.ಪ್ರೌಢಶಾಲೆಯ ಆಂಗ್ಲ ಶಿಕ್ಷಕ ಮಹೇಶ ಗಾಳಪ್ಪಗೋಳ ಮಾತನಾಡಿ, ರಕ್ತದಾನಕ್ಕೆ ಯುವಕರು ಮುಂದಾಗಬೇಕು, ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು, ವಯೋವೃದ್ಧರ ದೇಹದ ಬದಲು ಯುವಕರ ರಕ್ತ ಅಗತ್ಯ ಎಂದು ಹೇಳಿದರು. ರಕ್ತ, ಕಣ್ಣು, ಹೃದಯ, ಮೂತ್ರಪಿಂಡ ಹಾಗೂ ಇನ್ನೀತರ ಭಾಗಗಳನ್ನು ಇನ್ನೊಬ್ಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು, ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ ಎಂದರು.

ನೀಲೇಶ ಬೇನಾಳ, ರಮೇಶ ವಂದಾಲ, ಸಿಂಧೂರಪ್ಪ ಬಿರಾದಾರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಬಿ. ಮಾಶೆಟ್ಟಿ, ಜೆ.ಸಿ. ಮುಚ್ಚಂಡಿ, ಪವಾಡೆಪ್ಪ ಚಲವಾದಿ, ಡಾ ಪ್ರಕಾಶ ಬೀಳಗಿ, ಆಪ್ತ ಸಮಾಲೋಚಕ ಗಿರೀಶ ಹೂಗಾರ, ಮಂಜುನಾಥ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ಒಟ್ಟು 23 ಜನ ರಕ್ತವನ್ನು ನೀಡಿದರು.