ಬೇತಮಂಗಲ ರಸ್ತೆ ದುರಸ್ತಿಗೆ ರೈತ ಸಂಘ ಒತ್ತಾಯ

ಕೋಲಾರ ಮೇ. ೧೭:- ಕೋಲಾರ – ಬೇತಮಂಗಲ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಇದರಿಂದ ವಾಹನ ಸವಾರರಿಗೆ ಭಾರೀ ಹಿಂಸೆಯಾಗಿದ್ದು ಕೆಲವೊಮ್ಮೆ ಅಪಘಾತಗಳಾಗಿ ವಾಹನ ಚಾಲಕರು ಗಾಯಗೊಂಡಿರುತ್ತಾರೆ. ಇಷ್ಟೆಲ್ಲಾ ಅನಾಹುತಗಳು ಸಂಭವಿಸುತ್ತಿದೆ. ಈ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ರಸ್ತೆ ದುರಸ್ತಿ ಮಾಡಲು ಅನೇಕ ಭಾರಿ ಮನವಿ ಸಲ್ಲಿಸಿದ್ದರೂ ಇದುವರೆವಿಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವ ಅಧಿಕಾರಿಗಳ ನಿರ್ಲಕ್ಷ ಧೋರಣೆಯನ್ನು ನಮ್ಮ ಕೋಲಾರ ರೈತ ಸಂಘ ಸಂಸ್ಥಾಪಕ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ ಖಂಡಿಸಿದ್ದಾರೆ.
ಕೋಲಾರ-ಬೇತಮಂಗಲದ ಹಳ್ಳಕೊಳ್ಳಗಳಿರುವ ಹದಗೆಟ್ಟ ರಸ್ತೆಯಲ್ಲಿ “ನಮ್ಮ ಕೋಲಾರ ರೈತ ಸಂಘವು” ಪ್ರತಿಭಟಸಿ ಅವರು ಮಾತನಾಡಿ ಬೇತಮಂಗಲ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದರಿಂದ ವಾಹನ ಸವಾರರು ತಮ್ಮ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಸಂಚರಿ ಬೇಕಾದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ದೂರಿದ್ದಾರೆ.
ಕೋಲಾರ-ಬೇತಮಂಗಲ ರಸ್ತೆಯು ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಅದರಲ್ಲಿ ಬಂಗಾರಪೇಟೆ ಮತ್ತು ಕೋಲಾರ ವಿಧಾನಸಭಾ ವ್ಯಾಪ್ತಿಗೆ ಬರುವ ಗ್ರಾಮಗಳ ಮುಖ್ಯರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಇದರಿಂದ ವಾಹನ ಸವಾರರು ತೀವ್ರ ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ದುರಸ್ಥಿಗೊಳಿಸಲು ಅಂದಾಜಪಟ್ಟಿ ಸಿದ್ದಗೊಂಡಿರುತ್ತದೆ. ಎಂದು ಕಳೆದ ಆರು ತಿಂಗಳ ಹಿಂದೆಯೇ ಹೇಳಿರುತ್ತಾರೆ. ಆರು ತಿಂಗಳಾದರೂ ಇನ್ನೂ ರಸ್ತೆ ದುರಸ್ಥಿಗೊಳ್ಳದೇ ಇರುವುದು ಅಧಿಕಾರಿಗಳ ಬೇಜವಾಬ್ದಾರಿತನವನ್ನು ತೋರಿಸುತ್ತದೆ.
ಆದ್ದರಿಂದ ಈ ಕೂಡಲೇ ಇದರ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಹಾಳಾಗಿರುವ ರಸ್ತೆಯನ್ನು ದುರಸ್ಥಿಗೊಳಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷರಾದ ಕೆ.ಸಿ.ಪಿ ನಾಗರಾಜ್, ಜಿಲ್ಲಾ ಗೌರವಾಧ್ಯಕ್ಷ ಕೆಂಬೋಡಿ ಕೃಷ್ಣೇಗೌಡ, ಜಿಲ್ಲಾ ಉಪಾಧ್ಯಕ್ಷ ಯಲವಾರ ವಿಶ್ವನಾಥಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ನರಸಾಪುರ ಶ್ರೀಧರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮಧೇನಹಳ್ಳಿ ವೆಂಕಟಾಚಲಪತಿ, ಕೋಲಾರ ತಾಲ್ಲೂಕು ಅಧ್ಯಕ್ಷ ಶಿಳ್ಳಂಗೆರೆ ಗೋಪಾಲ್, ರೈತ ಮುಖಂಡರಾದ ಅಬ್ಬಣಿ ಮುನೇಗೌಡ,ದೊಡ್ನಹಳ್ಳಿ ವೆಂಕಟರಾಮಪ್ಪ, ಮುಜೀಬ್‌ಪಾಷ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.