ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮಾವಳ್ಳಿ ಶಂಕರ್ ಒತ್ತಾಯ

ಕಲಬುರಗಿ.ಅ.18: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸುಳ್ಳು ಜಾತಿ ಪ್ರಮಾಣಪತ್ರಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ರಾಜ್ಯ ಸರ್ಕಾರವು ಕೂಡಲೇ ನಿಲ್ಲಿಸಬೇಕು ಹಾಗೂ ಬೇಡ ಜಂಗಮ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರು ಹಾಗೂ ಕೊಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ರೇಣುಕಾಚಾರ್ಯ ಅವರ ಅಣ್ಣನ ಪುತ್ರಿಯು ಬೇಡ ಜಂಗಮ ಹೆಸರಿನಲ್ಲಿ ಸುಳ್ಳು ಎಸ್‍ಸಿ ಪ್ರಮಾಣಪತ್ರ ಪಡೆದಿದ್ದು, ಅದನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ, ಇನ್ನೂ ಇಂತಹ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆಯಲಾಗಿದ್ದು, ಪಡೆದವರು ಹಾಗೂ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು. ಸಿಆರ್‍ಸಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಜಾಗೃತಿ ಅಭಿಯಾನ ಆರಂಭಿಸಲಾಗಿದ್ದು, ಅಕ್ಟೋಬರ್ 26ರಂದು ಅಭಿಯಾನ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದ ಅವರು, ಸಂಸತ್ತಿನಲ್ಲಿ ಶೇಕಡಾ 33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಬಿಜೆಪಿ ಸರ್ಕಾರವು ಅಂಗೀಕರಿಸಿದೆ. ಇದು ಕೇವಲ ಚುನಾವಣಾ ರಾಜಕೀಯವಾಗಿದೆ ಎಂದು ದೂರಿದ ಅವರು, ಈಗ ಅಂಗೀಕರಿಸುವ ಮಸೂದೆಯು 2029ರ ವೇಳೆಗೆ ಜಾರಿಯಾಗಲಿದೆ. ಇದು ಸರಿಯಲ್ಲ. ಇದೇ ಲೋಕಸಭಾ ಚುನಾವಣೆಯಲ್ಲಿ ಅದೂ ಓಬಿಸಿ ಮೀಸಲಾತಿಯೊಂದಿಗೆ ಮಹಿಳಾ ಮೀಸಲಾತಿಯನ್ನು ಸಮಗ್ರವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಜಾತಿ ಜನಗಣತಿಯಿಂದ ಜಾತಿ, ಜಾತಿಗಳಲ್ಲಿ ದ್ವೇಷ ಹುಟ್ಟುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ವಿರೋಧಿಸಿದ ಮಾವಳ್ಳಿ ಶಂಕರ್ ಅವರು, ಒಂದು ಸಮುದಾಯದ ವಾಸ್ತವ ಸ್ಥಿತಿಯನ್ನು ಅರಿಯಲು ಜಾತಿ ಗಣತಿಯಾಗಲೇಬೇಕು. ಇದರಿಂದ ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಕಾಂತರಾಜ್ ಆಯೋಗದ ವರದಿಯು ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರವು ಅದನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿದ ಅವರು, ಈ ಹಿಂದೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ 168 ಕೋಟಿ ರೂ.ಗಳ ವೆಚ್ಚದಲ್ಲಿ ಸಾಮಾಜಿಕ, ಆರ್ಥಿಕ ಜಾತಿ ಗಣತಿ ಮಾಡಿದ್ದು, ಅದನ್ನು ಕೂಡಲೇ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿನ ಜಾತಿ ಗಣತಿ ಆಧಾರದ ಘೋಷಣೆಯನ್ನು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಲ್ಲಿಯೂ ಸಹ ಜಾರಿಗೆ ತರಬೇಕು ಎಂದು ಆಗ್ರಹಿಸಿದ ಅವರು, ಕೇಂದ್ರ ಸರ್ಕಾರವು ಪರಿಶಿಷ್ಟರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದೇ ಬೇರೆ, ಬೇರೆ ಯೋಜನೆಗಳಿಗೆ ಅನುದಾನ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಬೇಕು. ಆಂದ್ರ ಮತ್ತು ಕರ್ನಾಟಕ ಸರ್ಕಾರದ ಮಾದರಿಯಲ್ಲಿ ಪರಿಶಿಷ್ಟರಿಗೆ ಮೀಸಲಾಗಿರುವ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸದೇ ಇರುವ ಕುರಿತು ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಜುಕುಮಾರ್ ಜವಳಕರ್, ಅರ್ಜುನ್ ಗೊಬ್ಬೂರ್, ನಾಗಣ್ಣ ಬಡಿಗೇರ್, ಮಾರುತಿ ಮಳಗಿ ಮುಂತಾದವರು ಉಪಸ್ಥಿತರಿದ್ದರು.