ಬೇಡ ಜಂಗಮ ಸಮುದಾಯ ವಿವಿಧ ಬೇಡಿಕೆ ಈಡೇರಿಕೆಗೆ: ಬೆಂಗಳೂರು ಚಲೋ

ಸಾಸ್ವೆಹಳ್ಳಿ.ಜು.17: ‘ಬೆಂಗಳೂರಿನ ಪ್ರೀಡ್‌ಂ ಪಾರ್ಕ್ನಲ್ಲಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ ಇವರು 18 ದಿನಗಳಿಂದ ನಡೆಸುತ್ತಿರುವ ಸತ್ಯ ಪ್ರತಿಪಾದನ ಸತ್ಯಾಗ್ರಹಕ್ಕೆ, ಅವಳಿ ತಾಲ್ಲೂಕಿನ ಬೇಡ ಜಂಗಮ ಸಮಾಜದ ಬಂಧುಗಳು ಜು. 24 ರಿಂದ ಭಾಗವಹಿಸುವ ಮೂಲಕ ಬೆಂಬಲ ನೀಡಲಿದ್ದೇವೆ’ ಎಂದು ನ್ಯಾಮತಿ ಮತ್ತು ಹೊನ್ನಾಳಿ ಬೇಡ ಜಂಗಮ ಸಮಾಜದ ಹಿರಿಯ ಮುಖಂಡ ಎಚ್.ಎಂ.ಗಂಗಾಧರಯ್ಯ ಹೇಳಿದರು. ಹೋಬಳಿಯ ಕುಳಗಟ್ಟೆಯ ವೀರಶೈವ ಸಮುದಾಯದ ಭವನದಲ್ಲಿ ಭಾನುವಾರ ಅಯೋಜಿಸಿದ್ದ ಬೇಡ ಜಂಗಮ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಂವಿಧಾನ ಬದ್ಧವಾಗಿರುವ ಹಕ್ಕು ನಮ್ಮದು. ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಬೆಂಬಲಸಬೇಕು. ಜು.23 ರ ಶನಿವಾರ ಬೆಂಗಳೂರಿಗೆ ಸ್ವಂತ ಖರ್ಚಿನಲ್ಲಿ ಬರಬೇಕು’ ಎಂದು ಸೂಚಿಸಿದರು. ಸಮಾಜದ ಮುಖಂಡ ಎಂ.ಎಸ್.ಶಾಸ್ತ್ರಿ ಹೊಳೆಮಠ್ ಮಾತನಾಡಿ, ‘ನಮ್ಮ ಸಮುದಾಯಕ್ಕೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕು. ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ಜಂಗಮರ ತಾಳ್ಮೆ ಪರೀಕ್ಷೆ ಮಾಡಬಾರದು. ಆಶೀರ್ವಾದ ಮಾಡುವ ಸ್ವಾಮಿಗಳಿಂದ ಶಾಪ ಹಾಕುವ ಸ್ಥಿತಿ ನಿರ್ಮಾಣವಾಗಬಾರದು. ಪ್ರತಿ ಕ್ಷೇತ್ರದಲ್ಲಿ ಸೋಲಿಸುವ ಮತ್ತು ಗೆಲ್ಲಿಸುವ ಶಕ್ತಿ ನಮ್ಮ ಸಮುದಾಯಕ್ಕೆ ಇದೆ. ಅದಷ್ಟು ಬೇಗ ಸಂವಿಧಾನ ಪಾಲನೆಯಾಗಲಿ’ ಎಂದರು. ಸಭೆಯಲ್ಲಿ ಕುಳಗಟ್ಟೆ ಗ್ರಾಮದ ಮುರುಗೇಶಯ್ಯ , ಕೆ.ಎಂ.ಬಸವರಾಜಯ್ಯ , ಪರಮೇಶ್ವರಯ್ಯ , ಹಾಲಯ್ಯ ಬೈರನಹಳ್ಳಿ ಪಂಚಾಕ್ಷರಯ್ಯ , ರಾಂಪುರದ ಆರ್.ಎಂ. ಪ್ರಕಾಶಯ್ಯ , ಹನುಮನಹಳ್ಳಿ ಲೋಕಯ್ಯ , ತರಗನಹಳ್ಳಿ ದಯಾನಂದಸ್ವಾಮಿ ಮಾತನಾಡಿದರು. ಸಭೆಯಲ್ಲಿ ಅವಳಿ ತಾಲ್ಲೂಕಿನ ಸಮಾಜ ಬಾಂಧವರು ಇದ್ದರು.