ಬೇಡ ಜಂಗಮ ಮೀಸಲಾತಿ: ಶಾಸಕ ರಹೀಂಖಾನ್ ಸ್ಪಷ್ಟನೆಸರ್ಕಾರಕ್ಕೆ ಶಿಫಾರಸು ಪತ್ರ ನೀಡಿಲ್ಲ

ಬೀದರ್:ನ.14: ಬೇಡ ಜಂಗಮ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಯಾವುದೇ ಶಿಫಾರಸು ಪತ್ರ ನೀಡಿಲ್ಲ ಎಂದು ಶಾಸಕ ರಹೀಂಖಾನ್ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿರುವ ಶಿಫಾರಸು ಪತ್ರ ನಾನು ನೀಡಿದ್ದಲ್ಲ. ಅದರ ಮೇಲೆ ನನ್ನ ಸಹಿಯೂ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷನಾಗಿದ್ದ ಅವಧಿಯ ಲೆಟರ್ ಹೆಡ್ ತಿರುಚಿ, ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಾನು ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದೇನೆ. ಅವರ ತತ್ವ, ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದಿದ್ದೇನೆ. ಅವರ ಆಶಯಕ್ಕೆ ವಿರುದ್ಧವಾದ ಕೆಲಸ ಯಾವತ್ತೂ ಮಾಡಿಲ್ಲ ಎಂದು ಹೇಳಿದ್ದಾರೆ.

ಮೂಲ ಪರಿಶಿಷ್ಟ ಜಾತಿಗಳ ಏಳಿಗೆಗಾಗಿ ಕಲ್ಪಿಸಲಾಗಿರುವ ಮೀಸಲಾತಿಗೆ ಭಂಗ ಉಂಟು ಮಾಡುವ ಅಥವಾ ಕಸಿಯುವ ಪ್ರಯತ್ನಗಳಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಮೂಲ ಪರಿಶಿಷ್ಟ ಜಾತಿಗಳ ಶ್ರೇಯೋಭಿವೃದ್ಧಿ ಕಾರ್ಯಗಳಿಗೆ ನನ್ನ ಬೆಂಬಲ ಸದಾ ಇರಲಿದೆ ಎಂದು ತಿಳಿಸಿದ್ದಾರೆ.