ಬೇಡ ಜಂಗಮ ಪ್ರಮಾಣ ಪತ್ರ ರದ್ದು ಖಂಡನೀಯ

ಔರಾದ :ಎ.11: ರವೀಂದ್ರ ಕಲ್ಲಯ್ಯಾ ಸ್ವಾಮಿಯವರಿಗೆ ನೀಡಿರುವ ಬೇಡ ಜಂಗಮ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ರದ್ದು ಪಡಿಸಿರುವುದು ಖಂಡನೀಯ ರಾಜಕೀಯವಾಗಿ ಜಂಗಮ ಸಮಾಜವನ್ನು ತುಳಿಯುವ ಹುನ್ನಾರ ಕಂಡು ಬರುತ್ತಿದೆ, ಕೂಡಲೇ ಅವರ ಜಾತಿ ಪ್ರಮಾಣ ಪತ್ರ ರದ್ದು ಆದೇಶ ಹಿಂಪಡೆಯಬೇಕೆಂದು ಔರಾದ ತಾಲೂಕು ಬೇಡ ಜಂಗಮ ಸಮಾಜ ಬಾಂಧವರು ಆಗ್ರಹಿಸಿದ್ದಾರೆ.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮಾನ್ಯ ತಹಸೀಲ್ದಾರ ಅವರ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರವೀಂದ್ರ ಕಲ್ಲಯ್ಯಾ ಸ್ವಾಮಿಯವರು 2019 ರ ಅ.27 ರಂದು ತಹಸೀಲ್ದಾರರಿಂದ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆ. ಚುನಾವಣಾ ಸಮಯದಲ್ಲಿ ಏಕಾಏಕಿ ಪ್ರಮಾಣಪತ್ರ ರದ್ದು ಪಡಿಸಿರುವುದು ಖಂಡನಾರ್ಹ ವಾಗಿದ್ದು ಇದು ಜಂಗಮ ಸಮಾಜವನ್ನು ರಾಜಕೀಯವಾಗಿ ಬೆಳೆಯಲು ಬಿಡಬಾರದು ಎಂದು ಕೆಲ ಕಾಣದ ಕೈಗಳು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದ್ದಾರೆ.

ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಹಾಗೂ ಇತರೆ ವರ್ಗಗಳ(ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ಮತ್ತು ನಿಯಮಗಳು 1992 ನಿಯಮ 4/ಎಫ್ ಪ್ರಕಾರ, ದಿನಾಂಕ 23/03/2018 ರಂದು ಮೇಲ್ಮನವಿಯನ್ನು ತಿರಸ್ಕರಿಸುವ ಮೂಲಕ, ಮಾನ್ಯ ಜಿಲ್ಲಾಧಿಕಾರಿಗಳ ಹಂತದಲ್ಲಿದ್ದ ರವೀಂದ್ರ ಸ್ವಾಮಿಯವರ ಜಾತಿ ಪ್ರಮಾಣ ಪತ್ರದ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರೂ ಸಹ, ಮತ್ತೊಮ್ಮೆ ಮಾನ್ಯ ಜಿಲ್ಲಾಧಿಕಾರಿಗಳು ಬೀದರ್ ರವರು 4/ಎಫ್ ರಡಿಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡು ಉಲ್ಲೇಖಿತ ಆದೇಶದನ್ವಯ ರವೀಂದ್ರ ಸ್ವಾಮಿ ತಂದೆ ಕಲ್ಲಯ್ಯಾ ಸ್ವಾಮಿ, ಬೇಡ ಜಂಗಮ(ಪರಿಶಿಷ್ಟ ಜಾತಿ) ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿದ ಆದೇಶ ಹಿಂಪಡೆಯಬೇಕು.

ರಾಜಕೀಯವಾಗಿ ನಮ್ಮ ಜಂಗಮ ಸಮಾಜ ಹಿಂದುಳಿದಿದ್ದು, ನಮ್ಮ ಸಮಾಜವನ್ನು ತುಳಿಯುವ ಹುನ್ನಾರ ಖಂಡನೀಯ, ನ್ಯಾಯಬದ್ದವಾಗಿ ಹೋರಾಟ ಮಾಡಿ ಹೈಕೋರ್ಟ್ ನಿಂದ ಜಾತಿ ಪ್ರಮಾಣ ಪತ್ರ ಪಡೆದಿರುವ ಮಾನ್ಯ ರವೀಂದ್ರ ಸ್ವಾಮಿ ಅವರ ಜಾತಿ ಪ್ರಮಾಣ ಪತ್ರ ಸತ್ಯ ಹಾಗೂ ನ್ಯಾಯಬದ್ದವಾಗಿರುತ್ತದೆ, ರಾಜಕೀಯ ಒತ್ತಡಕ್ಕೆ ಮಣಿದು ರವೀಂದ್ರಸ್ವಾಮಿಯವರ ಪ್ರಮಾಣ ಪತ್ರರದ್ದು ಪಡಿಸಿರುವುದು ಖಂಡನಾರ್ಹ. ತಕ್ಷಣವೇ ಇದರಬಗ್ಗೆ ತನಿಖೆ ನಡಿಸಿ, ಇವರ ಪ್ರಮಾಣ ಪತ್ರ ಸರಿಪಡಿಸಿ ರವಿ ಸ್ವಾಮಿಯವರು ಔರಾದ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ನಿಲ್ಲುವಂತೆ ಸಹಕರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಸಯ್ಯ ಸ್ವಾಮಿ ಜಿರ್ಗಾ, ನೆಹರೂ ಸ್ವಾಮಿ ಧೂಪತಮಹಾಗಾಂವ, ಶ್ರೀಕಾಂತ ಸ್ವಾಮಿ ಸೋಲಪುರ, ಕಾರ್ತಿಕ ಸ್ವಾಮಿ, ಅಮರಸ್ವಾಮಿ, ಸೂರ್ಯಕಾಂತ ಸ್ವಾಮಿ ತುಳಜಾಪೂರ, ಶಿವಾನಂದ ಸ್ವಾಮಿ ದಾಬಕಾ, ತ್ರಿಮುಕ ಸ್ವಾಮಿ, ಗಂಗಾಧರ ಸ್ವಾಮಿ, ರತಿಕಾಂತ ಸ್ವಾಮಿ, ರಾಚಯ್ಯ ಸ್ವಾಮಿ, ಸೂರ್ಯಕಾಂತ ಸ್ವಾಮಿ, ರೇವಣಯ್ಯ ಸ್ವಾಮಿ, ಪ್ರಭು ಸ್ವಾಮಿ, ಗಣೇಶ ಸ್ವಾಮಿ, ಲೊಕೇಶ ಸ್ವಾಮಿ, ವಿರೇಶ ಸ್ವಾಮಿ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.