ಬೇಡಿಕೆ ಕಾಯ್ದಿರಿಸಿ ತಕ್ಷಣ ಸೇವೆ ಆರಂಭಿಸಿ ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು,ಏ.20-ಕೊರೊನಾ ಸಂಕಷ್ಟದ ಸಮಯದಲ್ಲಿ ಮುಷ್ಕರ ಹೂಡುವುದು ಸರಿಯಲ್ಲ. ನಿಮ್ಮ ಬೇಡಿಕೆ ಕಾಯ್ದಿರಿಸಿ ತಕ್ಷಣ ಸೇವೆ ಆರಂಭಿಸಿ ಎಂದು ಸಾರಿಗೆ ನೌಕರರ ಸಂಘಕ್ಕೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ.
ರಾಜ್ಯದಲ್ಲಿ ಸಾರಿಗೆ ನೌಕರರ ಮಷ್ಕರ ನಡೆಯುತ್ತಿದ್ದು ಕೊರೊನಾ ನಡುವೆ ಮುಷ್ಕರ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ಹೈಕೋರ್ಟ್ ವಿಭಾಗೀಯ ಪೀಠ ಇಂದು ತಕ್ಷಣ ಸೇವೆ ಆರಂಭಿಸಿ ಎಂದು ಸಾರಿಗೆ ನೌಕರರ ಸಂಘಕ್ಕೆ ರಾಜ್ಯ ಹೈಕೋರ್ಟ್ ಸೂಚಿಸಿದೆ.
ಬಸ್ ಸೇವೆಗಳ ವ್ಯತ್ಯಯದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಸದ್ಯ ಶೇ. 44 ರಷ್ಟು ಬಸ್​ಗಳು ಮಾತ್ರ ಸಂಚಾರ ನಡೆಸಿವೆ. ಕೊವಿಡ್ 19 ನಿಂದ ಈಗಾಗಲೇ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಲಸಿಕೆ ಕೇಂದ್ರಗಳಿಗೂ ಜನ ತೆರಳಲು ಆಗುತ್ತಿಲ್ಲ. ಜನರ ಕೈಗೆಟುಕುವ ಸರ್ಕಾರಿ ಬಸ್​ಗಳ ಅಗತ್ಯವಿದೆ. ಆಸ್ಪತ್ರೆಗಳಿಗೆ ಹೋಗಲು ಬಸ್​ಗಳ ಅಗತ್ಯವಿದೆ. ಈ ವೇಳೆ ಮುಷ್ಕರ ಹೂಡುವುದಕ್ಕೆ ಸೂಕ್ತ ಕಾಲವಲ್ಲ. ಜನಸಾಮಾನ್ಯರ ಮೂಲಭೂತ ಹಕ್ಕಿಗೆ ಧಕ್ಕೆಯಾಗಲಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ರವರ ಪೀಠ ಅಭಿಪ್ರಾಯಪಟ್ಟಿದ್ದು, ಸಾರಿಗೆ ನೌಕರರೊಂದಿಗೆ ಮಧ್ಯಸ್ಥಿಕೆಗೂ ಹೈಕೋರ್ಟ್ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮುಷ್ಕರ ನಿರತರ ವಿರುದ್ಧ ಎಸ್ಮಾ ಜಾರಿಗೊಳಿಸಲಾಗಿದೆ. ಸರ್ಕಾರ ಲೇಬರ್ ಕೋರ್ಟ್​ಗೂ ಅರ್ಜಿ ಸಲ್ಲಿಸಿದೆ. ಸಾರಿಗೆ ಮುಷ್ಕರ ಕಾನೂನುಬಾಹಿರವೆಂದು ಘೋಷಿಸಲಾಗಿದೆ. ಕೆಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಸರ್ಕಾರಿ ನೌಕರರಾಗಿಸುವ ಬೇಡಿಕೆ ಪರಿಗಣನೆ ಸಾಧ್ಯವಿಲ್ಲ ಎಂದು ಹೈಕೋರ್ಟ್​ಗೆ ಎಜಿ ಪ್ರಭುಲಿಂಗ ಕೆ.ನಾವದಗಿ ಹೇಳಿಕೆ ನೀಡಿದ್ದಾರೆ.