ಬೇಡಿಕೆ ಈಡೇರಿಸಲು 14 ದಿನಗಳ ಗಡವು ನೀಡಿದ ಕಾರ್ಮಿಕರು

ಚಿಂಚೋಳಿ,ಏ.8- ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಡಳಿತ ಮಂಡಳಿಗೆ 14 ದಿನಗಳ ಕಾಲ ಗಡುವು ನೀಡಿರುವ ಛತ್ರಸಾಲ ಕಾರ್ಖಾನೆಯ ಕಾರ್ಮಿಕರು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಛತ್ರಸಾಲ ಕಲಬುರಗಿ ಸಿಮೆಂಟ್ ಪ್ರೈ.ಲಿಮಿಟೆಡ್ ಛತ್ರಸಾಲ ಕಾರ್ಖಾನೆ ಆರಂಭವಾಗಿ 10 ವರ್ಷ ಗತಿಸಿದರೂ ಇಲ್ಲಿನ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂಧಿಸದೇ ಏಕಪಕ್ಷಿಯವಾಗಿ ಹಾಗೂ ವೇತನ ತಾರತಮ್ಯ ಅನುಸರಿಸುತ್ತಿದೆ.
ನಿಯೋಜಿತ ಸಂಘದ ಪದಾಧಿಕಾರಿಗಳ ಪಟ್ಟಿಯಲ್ಲಿರುವ ನಾಲ್ವರು ಕಾರ್ಮಿಕರನ್ನು ಮುಂಬಯಿ ಪಟ್ಟಣಕ್ಕೆ ವರ್ಗಾಯಿಸಿರುವುದನ್ನು ರದ್ದು ಪಡಿಸಬೇಕು, ಕೆಲಸ ಸ್ಥಗಿತಗೊಳಿಸಿರುವ ಗುತ್ತಿಗೆ ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರನ್ನು ಸದರಿ ಕೆಲಸದಲ್ಲಿ ಮುಂದುವರೆಸಬೇಕು, ಕಾರ್ಖಾನೆ ಸ್ಥಾಪನೆಗಾಗಿ ಭೂಮಿ ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು, ಕಾರ್ಖಾನೆಗಾಗಿ ನೀಡಲಾದ ಇಲ್ಲಿನ 2 ಸಾವಿರ ಎಕರೆ ಜಮೀನಿನ ಕೃಷಿ ಕೂಲಿಕಾರರಿಗೂ ಕಾರ್ಖಾನೆಯಲ್ಲಿ ಕೆಲಸ ನೀಡಬೇಕು ಎಂಬ ಪ್ರಮುಖ 8 ಬೇಡಿಕೆಯ ಮನವಿ ಪತ್ರವನ್ನು ನೀಡಿರುವ ಕಾರ್ಮಿಕ ಸಂಘಟನೆ ಇದಕ್ಕೆ ಸ್ಪಂಧಿಸದಿದ್ದಲ್ಲಿ ಬೀದಿಗಿಳಿದು ಹೋರಾಟ ಕೈಗೊಳ್ಳುವುದಾಗಿ ಸಂಘಟನೆಯ ಅಧ್ಯಕ್ಷ ಭೀಮರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ನವಾಬ ಅವರು ಎಚ್ಚರಿಸಿದೆ.