ಬೇಡಿಕೆ ಈಡೇರಿಸದಿದ್ದರೆ ಹೋರಾಟ

ಹುಬ್ಬಳ್ಳಿ, ಜು 18: ವೀರಶೈವ-ಲಿಂಗಾಯತ ಜಂಗಮರು ಪರಿಶಿಷ್ಟ ಜಾತಿಯ ಬೇಡ ಜಂಗಮ, ಬುಡ್ಗ ಜಂಗಮ, ಮಾಲಾ ಜಂಗಮರೆಂದು ಜಾತಿ ಪ್ರಮಾಣಪತ್ರಕ್ಕಾಗಿ ಆಗ್ರಹಿಸುತ್ತಿರುವುದು ಖಂಡನೀಯ ಎಂದು ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ನಮ್ಮ ಬೇಡಿಕೆಗಳಾದ ಮೀಸಲಾತಿ ಕಬಳಿಕೆ ಹುನ್ನಾರ ನಡೆಸಿರುವ ಸಮುದಾಯಗಳ ಕುರಿತು ಅಧ್ಯಯನ ನಡೆಸುವುದು, ಹಿಂದಿನ ಸರ್ಕಾರದಲ್ಲಿ ನಡೆಸಲಾದ ಜಾತಿ ಜನಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆ ಮಾಡಬೇಕು, ಜನಸಂಖ್ಯೆವಾರು ಮೀಸಲಾತಿಯನ್ನು ಹೆಚ್ಚಳ ಮಾಡಲು ವಿಶೇಷವಾದ ಸದನ ನಡೆಸುವುದು, ಅಲ್ಲದೇ ಈ ವಿಷಯ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದು, ಕಳೆದ 3-4 ವರ್ಷಗಳಿಂದ ರಾಜ್ಯದಲ್ಲಿ ಸರ್ಕಾರಿ-ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ 1 ನೇ ತರಗತಿಗೆ ದಾಖಲಾದ ಪ.ಜಾ, ಪ.ಪಂ ಇತರೆ ಹಿಂದುಳಿದ ವರ್ಗದ ಮಕ್ಕಳ ಜಿಲ್ಲಾವಾರು ಮತ್ತು ಜಾತಿವಾರು ವಿವರದ ಮಾಹಿತಿ ವೆಬ್‍ಸೈಟ್ ಮೂಲಕ ಹಾಗೂ ಸಾರ್ವಜನಿಕವಾಗಿ ಬಿಡುಗಡೆ ಮಾಡುವದು ಅಲ್ಲದೇ ಆರ್.ಟಿ.ಐ. ಅಡಿ ಕೋರಿಕೆಯನುಸಾರ ಪ್ರಶ್ನಿಸಲು ಕ್ರಮವಹಿಸುವುದು ಸೇರಿದಂತೆ, ಪ.ಜಾ. ಗೆ ಸೇರಿದ ಜಾತಿ ಪ್ರಮಾಣಪತ್ರ ಪಡೆದ ಮೇಲ್ವರ್ಗದ ಪ್ರಮುಖರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಮತ್ತು ಈ ವಿಷಯಕ್ಕೆ ಸಹಕರಿಸಿದ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಸರ್ಕಾರಕ್ಕೆ ಉಳ್ಳಿಕಾಶಿ ಒತ್ತಾಯಿಸಿದರು.
ಈ ಕುರಿತು ರಾಜ್ಯ ಸರ್ಕಾರ 15 ದಿನಗಳಲ್ಲಿ ಸೂಕ್ತ ಕ್ರಮವಹಿಸಬೇಕೆಂದು ಸಮತಾ ಸೇನಾ ಮತ್ತು ವಿವಿಧ ದಲಿತ ಪರ ಸಂಘಟನೆಗಳ ಮಹಾಮಂಡಳ ವತಿಯಿಂದ ಸರ್ಕಾರಕ್ಕೆ ಮನವಿ ಮೂಲಕ ಒತ್ತಾಯಿಸುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ವಿರೋಧ ನಡೆ ನಡೆಸಿದರೇ ರಾಜ್ಯದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೇಮನಾಥ ಚಿಕ್ಕತುಂಬಳ, ಪ್ರಭು, ಶಾಂತರಾಜ ಪೆÇೀಳ, ದೇವೇಂದ್ರಪ್ಪ ಇಟಗಿ ಮತ್ತಿತರರು ಉಪಸ್ಥಿತರಿದ್ದರು.