ಬೇಡಿಕೆ ಈಡೇರಿಸದಿದ್ದರೆ ವೈದ್ಯಕೀಯ ಸೇವೆ ಸ್ಥಗಿತ: ಎಚ್ಚರಿಕೆ

ಬೀದರ:ಸೆ.15- ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಎಚ್.ಎಸ್.) ಮಾದರಿಯಂತೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಕ್ರಮ ವಹಿಸಬೇಕು ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.

ಸಂಘದ ಕಾರ್ಯದರ್ಶಿ ಡಾ. ಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಸೋಮವಾರ ವೈದ್ಯರು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರನ್ನು ಭೇಟಿ ಮಾಡಿ ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿದರು.

ಸೆ. 15ರೊಳಗೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹಂತಹಂತವಾಗಿ ಮುಷ್ಕರದ ಮೊರೆ ಹೋಗಲಾಗುವುದು. ಸೆ.15ರಿಂದ ಇಲಾಖೆಯ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಸರ್ಕಾರಕ್ಕೆ ನೀಡುತ್ತಿರುವ ವರದಿಗಳನ್ನು ಸ್ಥಗಿತಗೊಳಿಸಿ ಆರೋಗ್ಯ ಸೇವೆಯನ್ನು ನೀಡುವುದು ಹಾಗೂ ಸೆ. 21ರಿಂದ ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ವೈದ್ಯರ ಬೇಡಿಕೆಗಳ್ಯಾವವು?
ಕೋವಿಡ್ 19 ಅವಧಿಯಲ್ಲಿ ಚಿಕಿತ್ಸೆ ನೀಡುತ್ತಿದ್ದ 15 ವೈದ್ಯಾಧಿಕಾರಿಗಳು ಹಾಗೂ ಹಲವು ಸಿಬ್ಬಂದಿ ವರ್ಗದವರು ಸಾವನ್ನಪ್ಪಿದ್ದಾರೆ. ಕೋವಿಡ್ 19 ಸೇವೆಯಲ್ಲಿದ್ದು ಮೃತಪಟ್ಟ ವೈದ್ಯರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು.

ಕೇಂದ್ರದ ಗರೀಬ್ ಕಲ್ಯಾಣ ಯೋಜನೆಯ ವಿಮೆಯಲ್ಲೂ ಸೋಂಕು ದೃಢಪಟ್ಟಿದ್ದರೆ ಮಾತ್ರ ಪರಿಹಾರ ಸಿಗುತ್ತದೆ. ಇವರೆಲ್ಲರೂ ಕೋವಿಡ್ 19 ಕಾರ್ಯ ಒತ್ತಡದಿಂದ ಮೃತಪಟ್ಟಿದ್ದಾರೆ. ಹೀಗಾಗಿ ಇವರೂ ಕೋವಿಡ್ 19 ಯೋಧರೇ ಆಗಿರುವುದರಿಂದ ಇವರಿಗೂ ಸಹ ಪರಿಹಾರ ನೀಡಬೇಕು.

ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯರಿಗೂ ಹಾಗೂ ಆರೋಗ್ಯ ಇಲಾಖೆ ವೈದ್ಯರ ವೇತನಕ್ಕೆ ಸಾಕಷ್ಟು ತಾರತಮ್ಯವಿದ್ದು, ಇದನ್ನು ನಿವಾರಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಮಾಡಬೇಕು, ವೈದ್ಯರ ಮೇಲೆ ಆರೋಪ ಬಂದಾಗ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಾಬೀತಾದರೆ ಮಾತ್ರ ಅಮಾನತು ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.